ಇಂಪಾಲ: ಮಣಿಪುರದಲ್ಲಿ (Manipur) ಹಲವು ಶಾಸಕರ ನಿವಾಸಗಳ ಮೇಲೆ ದಾಳಿ ನಡೆದ ಕೆಲವೇ ದಿನಗಳಲ್ಲಿ ರಾಜ್ಯ ಸಚಿವರೊಬ್ಬರು ತಮ್ಮ ಮನೆಗೆ ಭದ್ರತೆ ಹೆಚ್ಚಿಸಿಕೊಂಡಿದ್ದಾರೆ.
ಖುರಾಯ್‌ನ ಬಿಜೆಪಿ (BJP) ಶಾಸಕ ಹಾಗೂ ಸಚಿವ ಲೀಶಾಂಗ್ಥೆಮ್ ಸುಸಿಂದ್ರೋ ಮೈತೆಯ್ (Leishangthem Susindro Meitei) ಅವರು ತಮ್ಮ ಮನೆಯ ಸುತ್ತ ಮುಳ್ಳುತಂತಿ ಬೇಲಿಯನ್ನು ನಿರ್ಮಿಸಿ, ಬಂಕರ್ ಕೂಡ ನಿರ್ಮಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚಿಗೆ ಜಿರಿಬಾಮ್‌ನಿಂದ (Manipur Jiribam) ನಾಪತ್ತೆಯಾಗಿದ್ದ 6 ಮಂದಿಯನ್ನು ಉಗ್ರರು ಹತ್ಯೆಗೈದಿದ್ದರು. ಈ ಪೈಕಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹ ಜಿರಿಬಾಮ್ ಜಿಲ್ಲೆಯ ಬೊರೊಬೆಕ್ರಾದಿಂದ 16 ಕಿಮೀ ದೂರದ ನದಿಯಲ್ಲಿ (River) ಪತ್ತೆಯಾಗಿತ್ತು. ಇದನ್ನು ವಿರೋಧಿಸಿ ಪ್ರತಿಭಟನಾಕಾರರು ಶನಿವಾರ ಶಾಸಕರು ಮತ್ತು ಸಚಿವರ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಉದ್ರಿಕ್ತ ಗುಂಪು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ನಿವಾಸಕ್ಕೆ ನುಗ್ಗಲು ಯತ್ನಿಸಿತ್ತು. ಇದಾದ ಬೆನ್ನಲ್ಲೇ ಇಂಫಾಲ್‌ನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ವಿಶೇಷವಾಗಿ ಸಿಂಗ್ ಅವರ ನಿವಾಸ ಮತ್ತು ರಾಜಭವನದ ಸುತ್ತಲೂ ಭಾರೀ ಭದ್ರತೆ ಕೈಗೊಳ್ಳಲಾಗಿದೆ.
ಹೆಚ್ಚುತ್ತಿರುವ ಹಿಂಸಾಚಾರದ ಮಧ್ಯೆ, ಸರ್ಕಾರ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇಂಫಾಲ್ ಪೂರ್ವ ಮತ್ತು ಪಶ್ಚಿಮ, ಬಿಷ್ಣುಪುರ್, ತೌಬಲ್, ಕಕ್ಚಿಂಗ್, ಕಾಂಗ್‌ಪೋಕ್ಪಿ ಮತ್ತು ಚುರಾಚಂದ್‌ಪುರದಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ ಗೊಳಿಸಲಾಗಿದೆ.
ಇಂಟರ್ನೆಟ್ ನಿಷೇಧವು ಪ್ರಮುಖ ಕಚೇರಿಗಳು, ಸಂಸ್ಥೆಗಳು ಮತ್ತು ಮನೆಯಿಂದ ಕೆಲಸ ಮಾಡುವ ಜನರ ಕೆಲಸಕ್ಕೆ ತೊಂದರೆಯಾಗಿದ್ದರಿಂದ ಬ್ರಾಡ್‌ಬ್ಯಾಂಡ್ ಸೇವೆಗಳ ಮೇಲಿನ ಅಮಾನತ್ತನ್ನು ಇಂದು ತೆಗೆದುಹಾಕಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಹೆಚ್ಚುತ್ತಿರುವ ಹಿಂಸಾಚಾರವನ್ನು ನಿಗ್ರಹಿಸಲು, ಮಣಿಪುರ ಪೊಲೀಸರು ಪಶ್ಚಿಮ ಇಂಫಾಲ ಮತ್ತು ಪೂರ್ವ ಇಂಫಾಲ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಿದ್ದಾರೆ.