– ವಲಸೆ ಕಾರ್ಮಿಕರು ಪುರಭವನಕ್ಕೆ ಆಗಮಿಸದಂತೆ ಡಿಸಿ ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತವು ಮಂಗಳೂರಿನಲ್ಲಿದ್ದ ವಲಸೆ ಕಾರ್ಮಿಕರನ್ನು ಕೊನೆಗೂ ಇಂದು ಬೆಳಗ್ಗಿನ ಜಾವ ಅವರ ಊರಿಗೆ ಕಳುಹಿಸಿಕೊಟ್ಟಿದೆ.
ಮಂಗಳೂರಿನ ಟೌನ್ ಹಾಲ್ ಬಳಿಯಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ 37 ಬಸ್‍ಗಳಲ್ಲಿ 1,100 ಜನ ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕಳುಹಿಸಿಕೊಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಯಿಂದ ನೂರಾರು ಕಾರ್ಮಿಕರು ಮಂಗಳವಾರ ಏಕಾಏಕಿ ಮಂಗಳೂರಿಗೆ ಆಗಮಿಸಿದ್ದರು. ಟೌನ್ ಹಾಲ್‍ನಲ್ಲಿ ಜಮಾಯಿಸಿದ್ದ ಅವರನ್ನು ಅವರ ಗ್ರಾಮಗಳಿಗೆ ಕಳುಹಿಸಲು ಪಾಲಿಕೆ ಕಮಿಷನರ್ ಅಜಿತ್ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಬೆಳಗ್ಗೆ ಪ್ರಯಾಣ ಆರಂಭಿಸಿರುವ ಕೂಲಿ ಕಾರ್ಮಿಕರು ಇಂದು ಸಂಜೆಯ ವೇಳೆಗೆ ತಮ್ಮ ತಮ್ಮ ಊರು ತಲುಪಲಿದ್ದಾರೆ.
ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪುರಭವನಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್, ವಲಸೆ ಕಾರ್ಮಿಕರು ಪುರಭವನಕ್ಕೆ ಆಗಮಿಸದಂತೆ ಸೂಚನೆ ನೀಡಿದ್ದಾರೆ. ಸರ್ಕಾರದ ಸೂಚನೆಯಂತೆ ವಲಸೆ ಕಾರ್ಮಿಕರಿಗೆ ಪ್ರಯಾಣದ ವ್ಯವಸ್ಥೆ ಮಾಡುತ್ತೇವೆ. ಅವರ ಸ್ವಗ್ರಾಮಕ್ಕೆ ಹಾಗೂ ಕೆಲಸದ ಸ್ಥಳಗಳಿಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ವಲಸೆ ಕಾರ್ಮಿಕರು ತಾವು ಇರುವ ಸ್ಥಳದಲ್ಲಿಯೇ ಇರಬೇಕು. ಆಯಾ ವಾರ್ಡ್ ನಲ್ಲಿ ಸ್ಥಳೀಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲಿದ್ದಾರೆ. ನಂತರ ಕಾರ್ಮಿಕರಿಗೆ ಪ್ರಯಾಣದ ಬಗ್ಗೆ ಸೂಚನೆ ನೀಡಲಾಗುವುದು. ಗುತ್ತಿಗೆದಾರರು ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸಲು ನಗರಕ್ಕೆ ಕರೆ ತಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ ಅಂತವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.