ಮಂಗಳೂರು: ಕರಾವಳಿಯಲ್ಲಿ ಇಷ್ಟಾರ್ಥ ಈಡೇರಿಕೆಗೆ ಹರಕೆ ಹೇಳಿ ಯಕ್ಷಗಾನ ಮಾಡಿಸುತ್ತಾರೆ.
ಪ್ರಧಾನಿ ಮೋದಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಲ್ಲಿ ಕಟೀಲು ಮೇಳದ ಯಕ್ಷಗಾನ ಆಡಿಸುವುದಾಗಿ ಮಂಗಳೂರಿನ ಟೀಂ ಮೋದಿ ತಂಡ ಹರಕೆ ಹೊತ್ತಿತ್ತು. ಅದರಂತೆ, ಭಾರೀ ಗೆಲುವಿನೊಂದಿಗೆ ಮೋದಿ ವಿಜಯ ಪತಾಕೆ ಹಾರಿಸುತ್ತಿದ್ದಂತೆ ಮಂಗಳೂರಿನಲ್ಲಿ ತರಾತುರಿಯಲ್ಲಿ ಕಟೀಲು ಮೇಳದಿಂದ ದೇವಿ ಮಹಾತ್ಮೆ ಹರಕೆ ಬಯಲಾಟ ಆಡಿಸಿದೆ.
ಬಿಜೆಪಿ ಶಾಸಕರು, ನೂತನ ಸಂಸದ ನಳಿನ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಯಕ್ಷಗಾನ ವೀಕ್ಷಣೆಗೆ ಆಗಮಿಸಿದ್ದರು. ಕಟೀಲು ದೇವಿಗೆ ಯಕ್ಷಗಾನ ಸೇವೆಯೂ ಪೂಜೆ ಇದ್ದಂತೆ. ಹಾಗಾಗಿ ಕಲಾವಿದರ ಮೂಲಕ ದೇವಿಯ ಕತೆಯನ್ನು ಆಡಿಸುವುದೇ ದೊಡ್ಡ ಸೇವೆ ಎನ್ನುವ ಪ್ರತೀತಿ ಇದೆ.
ಇದೀಗ ಮೋದಿ ಗೆಲುವಿಗಾಗಿ ಹರಕೆ ಹೊತ್ತುಕೊಂಡಿದ್ದ ಮೋದಿ ಟೀಂ ಮಂಗಳೂರಿನ ರಥಬೀದಿಯಲ್ಲಿ ಯಕ್ಷಗಾನದ ಹರಕೆ ಸೇವೆ ಸಲ್ಲಿಸಿ ಕೃತಾರ್ಥವಾಗಿದೆ.