ಮಂಗಳೂರು: ಸಹಪಾಠಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಗುರುನಂದನ್ (19), ಆರ್ಯಾಪು ಗ್ರಾಮದ ಸುನಿಲ್ (19), ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಪ್ರಜ್ವಲ್ (19), ಬರಿಮಾರು ಗ್ರಾಮದ ಪ್ರಖ್ಯಾತ್ (19) ಹಾಗೂ ಕಿಶನ್ (19) ಬಂಧಿತ ಆರೋಪಿಗಳು. ಈ ಆರೋಪಿಗಳು ಪುತ್ತೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು.
Advertisement
Advertisement
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು, ಸಂತ್ರಸ್ತೆ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದಾಳೆ. ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾಳೆ. ಫೆಬ್ರವರಿ ತಿಂಗಳಿನಲ್ಲಿ ವಿದ್ಯಾರ್ಥಿನಿ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದ ಸಹಪಾಠಿಗಳು ನಿನ್ನ ಜೊತೆಗೆ ಮಾತನಾಡಬೇಕು ಎಂದು ಹೇಳಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿಗಳು ತನಗೆ ಪರಿಚಿತರಾಗಿದ್ದರಿಂದ ಏನನ್ನೂ ಪ್ರಶ್ನಿಸದೇ ಸಂತ್ರಸ್ತೆ ಅವರೊಂದಿಗೆ ಹೋಗಿದ್ದಾಳೆ ಎಂದು ತಿಳಿಸಿದರು.
Advertisement
Advertisement
ಕಾರು ಕಾಡಿನ ಕಡೆಗೆ ಹೊಗುತ್ತಿದ್ದಂತೆ ಭಯಗೊಂಡ ವಿದ್ಯಾರ್ಥಿನಿ, ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಪ್ರಶ್ನಿಸಿದ್ದಾಳೆ. ಆಗ ಇಲ್ಲಿಯೇ ಸ್ವಲ್ಪ ದೂರ ಅಂತ ಹೇಳಿ ಯುವಕರು ನಿರ್ಜನ ಪ್ರದೇಶಕ್ಕೆ ಬಂದು ಕಾರು ನಿಲ್ಲಿಸಿದ್ದಾರೆ. ಬಳಿಕ ಆಕೆಗೆ ಮತ್ತು ಬರಿತ ಆಹಾರ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ದೃಶವನ್ನು ಕಾಮುಕರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದರು ಎಂದು ಮಾಹಿತಿ ನೀಡಿದರು.
ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಸಂತ್ರಸ್ತೆಗೆ ಆರೋಪಿಗಳು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ವಿದ್ಯಾರ್ಥಿನಿ ಯಾರ ಮುಂದೆಯೂ ಘಟನೆಯ ಬಗ್ಗೆ ಹೇಳಿಕೊಂಡಿರಲಿಲ್ಲ. ಅತ್ಯಾಚಾರ ಎಸಗುತ್ತಿರುವ ವಿಡಿಯೋ ಬೆಳಗ್ಗೆಯಿಂದ ವೈರಲ್ ಆಗಿದ್ದರಿಂದ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ ಎಂದರು.
ದ್ವೇಷದಿಂದ ಬಯಲಾಯ್ತು ಕೃತ್ಯ:
ಆರೋಪಿಗಳು ಫೆಬ್ರವರಿ ತಿಂಗಳಿನಲ್ಲಿಯೇ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆದರೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ವಿಡಿಯೋ ವೈರಲ್ ಆಗಿದ್ದರಿಂದ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಮುಖ್ಯ ಕಾರಣ ಆರೋಪಿಗಳ ಮಧ್ಯೆ ಮನಸ್ತಾಪ ಉಂಟಾಗಿದ್ದು ಎನ್ನಲಾಗಿದೆ.
ಕಾಲೇಜಿನ ಚುನಾವಣೆ ವಿಚಾರದಲ್ಲಿ ನಾಲ್ವರು ಆರೋಪಿ ವಿದ್ಯಾರ್ಥಿಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಈ ದ್ವೇಷ ಸಾಧನೆ ಉದ್ದೇಶದಿಂದ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಅನಾಮಧೇಯ ವ್ಯಕ್ತಿಯ ಹೆಸರಿನಲ್ಲಿ ವಿಡಿಯೋ ಹರಿಬಿಟ್ಟು ಪ್ರಕರಣವನ್ನು ಆರೋಪಿ ವಿದ್ಯಾರ್ಥಿಗಳೇ ಒಪ್ಪಿಕೊಂಡಿದ್ದಾರೆ ಎಂದು ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದರು.