ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುರಿಯ ಅಜಲಾಡಿ ಎಂಬಲ್ಲಿ ಮನೆಗೆ ನುಗ್ಗಿ ಒಂದೇ ಕುಟುಂಬದ ಇಬ್ಬರ ಕೊಲೆಗೈದ ಘಟನೆ ನಡೆದಿದೆ.
ಈ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ. ಮೃತ ದುರ್ದೈವಿಗಳನ್ನು ಕೊಗ್ಗು ಸಾಹೇಬ್ (62) ಮತ್ತು ಮೊಮ್ಮಗಳು ಸಮೀಹ(14) ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಕೊಗ್ಗು ಸಾಹೇಬರ ಪತ್ನಿ ಖತೀಜ(55) ಮೇಲೂ ಮಾರಣಾಂತಿಕ ಹಲ್ಲೆ ನಡೆದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಡರಾತ್ರಿ ತಂಡವೊಂದು ಏಕಾಏಕಿ ಕೊಗ್ಗು ಸಾಹೇಬ್ ಮನೆಗೆ ನುಗ್ಗಿ ಈ ಕೃತ್ಯ ಎಸಗಿದೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದಿನೊಂದಿಗೆ ತಂಡ ಎಸ್ಕೇಪ್ ಆಗಿದೆ. ಬಾಡಿಗೆ ಮನೆಯಲ್ಲಿ ಅಜ್ಜಿ, ಅಜ್ಜ ಮತ್ತು ಮೊಮ್ಮಗಳು ವಾಸವಾಗಿದ್ದರು. ಇಂದು ಬೆಳಗ್ಗೆ ಪುತ್ರ ರಝಾಕ್ ಮನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರಿನ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.