ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಕೆಯಾಗಿರುವ ಚಾರ್ಜ್ ಶೀಟ್ ನಲ್ಲಿ ನಿರೂಪಕಿ ಅನುಶ್ರೀ ಆರೋಪಿ ಅಂತ ಉಲ್ಲೇಖ ಆಗಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕಿಶೋರ್ ಅಮನ್ ಡ್ರಗ್ ಕೇಸ್ ಚಾರ್ಜ್ ಶೀಟ್ ಸಲ್ಲಿಕೆ ವಿಚಾರ ಸಂಬಂಧ ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಾರ್ಜ್ ಶೀಟ್ ಬಗ್ಗೆ ಆರೋಪಗಳಿದ್ರೆ ವಕೀಲರ ಮೂಲಕ ಕೋರ್ಟ್ ಗೆ ಹೇಳಬಹುದು. ಜಾರ್ಜ್ ಶೀಟ್ ನಲ್ಲಿ ಅನುಶ್ರೀ ಆರೋಪಿ ಎಂದು ಉಲ್ಲೇಖ ಆಗಿಲ್ಲ. ಕಿಶೋರ್ ಹೇಳಿಕೆಯಲ್ಲಷ್ಟೇ ಅನುಶ್ರೀ ಹೆಸರಿದೆ ಎಂದರು.
ಕಿಶೋರ್ ಅಮನ್ ಮತ್ತೆ ಕರೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಪ್ರಕರಣದ ಸಂಪೂರ್ಣ ತನಿಖೆ ಪೂರ್ತಿ ಮಾಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದೇವೆ. ಒಂಬತ್ತು ತಿಂಗಳ ಹಿಂದೆಯೇ ಅಂತಿಮ ವರದಿ ಸಲ್ಲಿಸಿದ್ದೇವೆ. ಈಗ ಯಾಕೆ ಈ ವಿಚಾರ ಸುದ್ದಿಯಾಯಿತು ಗೊತ್ತಿಲ್ಲ. ಅನುಶ್ರೀ ಮೇಲೆ ಬಂದ ಆರೋಪಕ್ಕೆ ಪೂರಕ ಸಾಕ್ಷಿಗಳು ಲಭ್ಯವಾಗಿಲ್ಲ. ಆರು ಜನ ಆರೋಪಿಗಳ ಮೇಲೆ ಅಂತಿಮ ವರದಿ ಸಲ್ಲಿಸಿದ್ದೇವೆ. ಐದು ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಒಬ್ಬ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. 2020 ಸೆಪ್ಟೆಂಬರ್ 19 ಪ್ರಕರಣ ದಾಖಲು ಆಗಿತ್ತು. 2020ರ ಡಿಸೆಂಬರ್ 11ರಂದು ಅಂತಿಮ ವರದಿ ಸಲ್ಲಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ
ಚಾರ್ಜ್ ಶೀಟ್‍ನಲ್ಲಿ ಏನಿದೆ?:
2007-0ರಲ್ಲಿ ನಾನು ಮತ್ತು ತರುಣ್ ಇಬ್ಬರೂ ಕೂಡಿ ಅನುಶ್ರೀಯವರಿಗೆ ಡ್ಯಾನ್ಸ್ ಕೋರಿಯಾಗ್ರಾಫಿ ಮಾಡಿರುತ್ತೇವೆ. ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್‍ಗೆ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ತರುಣ್ ಬಾಡಿಗೆ ಮನೆಯಲ್ಲಿ ತಡರಾತ್ರಿ ತನಕ ಪ್ರ್ಯಾಕ್ಟೀಸ್ ಮಾಡುತ್ತಾ ಕೆಲವು ದಿನ ಇದ್ದರು. ಕೆಲವೊಂದು ದಿನಗಳಲ್ಲಿ ನಾನು ಕೂಡ ತರುಣ್ ಜೊತೆಗೆ ಹೋಗಿದ್ದೆ. ಆ ದಿನಗಳಲ್ಲಿ ನಾವು ಮೂರು ಜನ ತರುಣ್‍ನ ಮನೆಯಲ್ಲೇ ಅಡುಗೆ ಮಾಡಿ ಊಟ ಮಾಡುವ ಸಮಯ ಮಾದಕ ವಸ್ತುಗಳಾದ ಎಕ್ಟಸಿ ಮಾತ್ರೆಗಳನ್ನು ಸೇವನೆ ಮಾಡಿರುತ್ತೇವೆ. ಕೆಲವು ದಿನಗಳಲ್ಲಿ ಅನುಶ್ರೀ ಮತ್ತು ತರುಣ್ ಇಬ್ಬರೇ ರೂಂನಲ್ಲಿ ಉಳಿದುಕೊಳ್ಳುತ್ತಿದ್ದರು. ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ
ಅನುಶ್ರೀಯವರು ಡ್ಯಾನ್ಸ್ ಕಾಂಪಿಟೇಶನ್‍ನಲ್ಲಿ ವಿನ್ ಆಗಿದ್ದಕ್ಕೆ ನಾನು, ತರುಣ್ ಮತ್ತು ಅನುಶ್ರೀ ಬೆಂಗಳೂರಿನಲ್ಲಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿ ಡ್ರಗ್ಸ್, ಡ್ರಿಂಕ್ಸ್ ಪಾರ್ಟಿ ಮಾಡಿರುತ್ತೇವೆ. ಮಾದಕ ಸೇವನೆ, ಖರೀದಿಯಲ್ಲಿ ಅನುಶ್ರೀಯವರು ಭಾಗಿಯಾಗಿರುತ್ತಾರೆ. ನಾವು ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡುವ ಸಮಯ ಮತ್ತು ಅನುಶ್ರೀಯವರಿಗೆ ಕೋರಿಯಾಗ್ರಾಫಿಂಗ್ ಪ್ರ್ಯಾಕ್ಟೀಸ್ ಮಾಡುವ ಸಮಯದಲ್ಲಿ ಹಲವಾರು ಬಾರಿ ಮಾದಕ ವಸ್ತು ಎಕ್ಟಸಿ ಮಾತ್ರೆಗಳನ್ನು ಸೇವಿಸಿರುತ್ತೇವೆ. ಅನುಶ್ರೀಯವರು ಪ್ರ್ಯಾಕ್ಟೀಸ್ ಮಾಡಲು ನಮ್ಮ ರೂಂಗೆ ಬರುವಾಗ ಎಕ್ಟಸಿ ಮಾತ್ರೆಗಳನ್ನು ಖರೀದಿಸಿ ತಂದು ನಮಗೆ ನೀಡಿ ನಮ್ಮ ಜೊತೆ ಸೇವೆನೆಯನ್ನೂ ಮಾಡಿರುತ್ತಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?
ಡ್ಯಾನ್ಸ್ ಮಾಡಲು ಇದು ಹೆಚ್ಚು ತಾಕತ್ತು ಕೊಡುತ್ತದೆ, ಡ್ಯಾನ್ಸ್ ಮಾಡಲು ಖುಷಿ ಸಿಗುತ್ತದೆ, ಪ್ರ್ಯಾಕ್ಟೀಸ್ ಮಾಡಲು ಸುಲಭವಾಗುತ್ತದೆ ಎಂದು ನಾವೆಲ್ಲರೂ ಮಾತಾಡಿಕೊಳ್ಳುತ್ತಿದ್ದೆವು. ಡ್ರಗ್ಸ್ ಯಾರು ನೀಡುತ್ತಾರೆ ಎಂದು ಅನುಶ್ರೀಯವರಿಗೆ ನಮಗಿಂತ ಹೆಚ್ಚು ತಿಳಿದಿದೆ. ಅವರಿಗೆ ಡ್ರಗ್ಸ್ ಪೆಡ್ಲರ್‍ಗಳ ಪರಿಚಯ ಇರುತ್ತದೆ. ಅವರು ಸುಲಭವಾಗಿ ಮಾದಕ ವಸ್ತುಗಳನ್ನು ತರಿಸುತ್ತಾರೆ. ಅವರು ಹೇಗೆ ತರಿಸುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದ್ದು, ಇದಕ್ಕೆ ಕಿಶೋರ್ ಅಮನ್ ಶೆಟ್ಟಿ ಸಹಿ ಕೂಡ ಹಾಕಿರುವ ಪ್ರತಿ ಲಭ್ಯವಾಗಿದೆ.