ತನ್ನ ಈ ವಿಶಿಷ್ಟ ಸೇವೆಯಿಂದ ದೇಶದ ಗಮನ ಸೆಳೆದ ಮಂಗ್ಳೂರಿನ ಕ್ಯಾಬ್ ಡ್ರೈವರ್

Public TV
2 Min Read
sunil ola

ಮಂಗಳೂರು: ಕ್ಯಾಬ್ ಡ್ರೈವರ್ ಗಳ ವಿರುದ್ಧ ಗ್ರಾಹಕರು ದೂರು ನೀಡುವುದು ನಿಮಗೆ ಗೊತ್ತೆ ಇದೆ. ಆದರೆ ಗ್ರಾಹಕರೊಬ್ಬರ ಫೇಸ್‍ಬುಕ್ ಪೋಸ್ಟ್ ನಿಂದಾಗಿ ಮಂಗಳೂರಿನ ಕ್ಯಾಬ್ ಡ್ರೈವರ್ ಒಬ್ಬರು ಈಗ ದೇಶದ ಗಮನ ಸೆಳೆದಿದ್ದಾರೆ.

ಹೌದು. ಮಂಗಳೂರು ಸಮೀಪದ ಮೂಡುಶೆಡ್ಡೆಯ ಸುನಿಲ್ ಅವರು ತಮ್ಮ ವಿಶಿಷ್ಟ ಸೇವೆಯಿಂದಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಾರೆ. ಎಫ್‍ಬಿ ಪೋಸ್ಟ್ ನಿಂದಾಗಿ 10ನೇ ತರಗತಿ ಓದಿರುವ ಸುನೀಲ್ ಈಗ ಹೀರೋ ಎನಿಸಿಕೊಂಡಿದ್ದಾರೆ.

ನಡೆದಿದ್ದು ಏನು?
ಅನಾರೋಗ್ಯಕ್ಕೆ ಒಳಗಾಗಿದ್ದ ತಮ್ಮ ತಂದೆಯನ್ನು ನಗರದ ಆಸ್ಪತ್ರೆಗೆ ಕರೆದೊಯ್ಯಲು ಕಾವ್ಯ ಅವರು ಓಲಾ ಕಾರನ್ನು ಮಂಗಳವಾರ ಮಧ್ಯಾಹ್ನ ಬುಕ್ ಮಾಡಿದ್ದರು. ಬುಕ್ ಮಾಡಿದ ಹಿನ್ನೆಲೆಯಲ್ಲಿ ಅಶೋಕ ನಗರದಿಂದ ಕಾವ್ಯ ಅವರ ತಂದೆಯನ್ನು ಸುನಿಲ್ ಆಸ್ಪತ್ರೆಗೆ ಡ್ರಾಪ್ ಮಾಡುತ್ತಾರೆ. ಕಾರಿನ ಬಾಡಿಗೆಯಾದ 140 ರೂ. ಅನ್ನು ಕಾವ್ಯ ಅವರ ತಾಯಿ ನೀಡಲು ಹೋದಾಗ ಸುನಿಲ್ ನಿರಾಕರಿಸಿತ್ತಾರೆ. ಎಷ್ಟು ಹೇಳಿದರೂ ಬಾಡಿಗೆ ಬೇಡ ಎಂದೇ ಹೇಳುತ್ತಾರೆ. ಕೊನೆಗೆ ತಾಯಿ ಬಾಡಿಗೆ ಬೇಡ, ಮನೆಯಿಂದ ಆಸ್ಪತ್ರೆಗೆ ಬರಲು ಪೆಟ್ರೋಲ್ ಖರ್ಚು ಆಗಿದೆಯಲ್ಲ. ಅದರ ದುಡ್ಡನ್ನು ತೆಗೆದುಕೊಳ್ಳಿ ಎಂದಾಗಲೂ ಸುನಿಲ್ ಬೇಡ ಎಂದು ಹೇಳಿ ಹಣವನ್ನು ಪಡೆಯಲು ನಿರಾಕರಿಸುತ್ತಾರೆ.

ಈ ವೇಳೆ ಯಾಕೆ ಬಾಡಿಗೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನಿಸಿದ್ದಕ್ಕೆ, “ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ನಾನು ದುಡ್ಡು ತೆಗೆದುಕೊಳ್ಳುವುದಿಲ್ಲ” ಎಂದು ಸುನಿಲ್ ಹೇಳುತ್ತಾರೆ. ಸಂಜೆ ತಾಯಿ ಅವರು ಮಗಳು ಕಾವ್ಯ ಅವರಲ್ಲಿ ನಡೆದ ವಿಚಾರವನ್ನು ತಿಳಿಸುತ್ತಾರೆ. ಈ ವಿಚಾರ ತಿಳಿದು ಸಂತೋಷಗೊಂಡ ಕಾವ್ಯ ಅವರು ಘಟನೆಯನ್ನು ಫೇಸ್‍ಬುಕ್‍ನಲ್ಲಿ ಬರೆದು ಪೋಸ್ಟ್ ಪ್ರಕಟಿಸಿದ್ದಾರೆ.

ಬಾಡಿಗೆ ತೆಗೆದುಕೊಂಡಿಲ್ಲ ಯಾಕೆ?
ಎರಡೂ ವರ್ಷಗಳಿಂದ ನಾನು ಮಂಗಳೂರಿನಲ್ಲಿ ಕಾರು ಓಡಿಸುತ್ತಿದ್ದೇನೆ. ನನ್ನ ತಾಯಿ 8 ತಿಂಗಳ ಹಿಂದೆ ನಿಧನರಾಗಿದ್ದಾರೆ. ತಾಯಿಯ ನೆನಪಿನಲ್ಲಿ ರೋಗಿಗಳಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಆಸ್ಪತ್ರೆಗೆ ಹೋಗಲು ಕಾರನ್ನು ಯಾರಾದರೂ ಬುಕ್ ಮಾಡದರೆ ನಾನು ಬಾಡಿಗೆ ತೆಗೆದುಕೊಳ್ಳುವುದಿಲ್ಲ. ಈ ಕಾರಣಕ್ಕಾಗಿ ಮಂಗಳವಾರವೂ ನಾನು ಬಾಡಿಗೆ ತೆಗೆದುಕೊಂಡಿರಲಿಲ್ಲ. ಆದರೆ ಬಾಡಿಗೆ ತೆಗೆದುಕೊಳ್ಳದೇ ಇರುವ ವಿಚಾರ ಈ ರೀತಿ ಶೇರ್ ಆಗುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ ಎಂದು ಸುನಿಲ್ ಪ್ರತಿಕ್ರಿಯಿಸಿದ್ದಾರೆ.

ಫೇಸ್‍ಬುಕ್‍ನಲ್ಲಿ ವೈರಲ್:
ಕಾವ್ಯ ಅವರು ಮಂಗಳವಾರ ಸಂಜೆ 6.35ಕ್ಕೆ ಫೇಸ್‍ಬುಕ್ ನಲ್ಲಿ ತಾಯಿಗೆ ಆದ ಅನುಭವವನ್ನು ಬರೆದು ಪೋಸ್ಟ್ ಪ್ರಕಟಿಸಿದ್ದಾರೆ. ಇದೂವರೆಗೆ ಈ ಪೋಸ್ಟನ್ನು ಅನ್ನು 4 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದರೆ, ಮೂರು ಸಾವಿರ ಮಂದಿ ಕಮೆಂಟ್ ಮಾಡಿದ್ದಾರೆ. 65 ಸಾವಿರ ಮಂದಿ ಲೈಕ್ ಮಾಡಿದ್ದಾರೆ. “ನಂಬಲು ಸಾಧ್ಯವೇ ಇಲ್ಲ. ನಿಜವಾದ ಮನುಷ್ಯತ್ವ ಅಂದರೆ ಇದು” ಎಂದು ಜನರು ಪ್ರಶಂಸೆ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.

ಆಟೋ ಡ್ರೈವರ್‍ಗಳು “200 ರೂ.” ಅಥವಾ “ಡಬಲ್ ಚಾರ್ಜ್” ಎಂದು ಹೇಳಿ ನಮ್ಮ ಜೊತೆ ಮಾತನಾಡಲು ಆರಂಭಿಸುತ್ತಾರೆ. ಕೆಲವು ಕ್ಯಾಬ್ ಡ್ರೈವರ್‍ಗಳು ಸ್ಥಳ ಇಷ್ಟ ಇಲ್ಲದ್ದಕ್ಕೆ ಬುಕ್ಕಿಂಗ್ ಕ್ಯಾನ್ಸಲ್ ಮಾಡುತ್ತಾರೆ. ಈ ರೀತಿಯ ವ್ಯಕ್ತಿಗಳ ನಡುವೆ ಡ್ರೈವರ್ ಸುನಿಲ್ ರತ್ನದಂತೆ ಹೊಳೆಯುತ್ತಾರೆ ಎಂದು ಕಾವ್ಯ ಅವರು ಎಫ್‍ಬಿಯಲ್ಲಿ ಬರೆದುಕೊಂಡಿದ್ದಾರೆ.

fb sunil post

fb sunil 2

Share This Article
Leave a Comment

Leave a Reply

Your email address will not be published. Required fields are marked *