– ದರೋಡೆಗೆ ಕೈಜೋಡಿಸಿದ್ದ ವ್ಯಕ್ತಿಯ ಪತ್ತೆಗೆ ಬಲೆ
– ಕೇವಲ 5 ನಿಮಿಷದಲ್ಲಿ 10 ಕೋಟಿ ದೋಚಿ ಪರಾರಿ
ಮಂಗಳೂರು: ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ (Kotekar Co Operative Bank Robbery) ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಚಿನ್ನಾಭರಣವನ್ನು (Gold) ದೋಚಲು ದರೋಡೆಕೋರರು ಭಾರೀ ಪ್ಲಾನ್ ಮಾಡಿದ್ದಾರೆ.ಆದರೆ ದರೋಡೆಕೋರರ ಕೃತ್ಯಕ್ಕೆ ಸಹಕಾರ ನೀಡಿದ್ದು ಸ್ಥಳೀಯ ವ್ಯಕ್ತಿಯೇ ಎಂಬ ಸ್ಪೋಟಕ ಮಾಹಿತಿ ಪೊಲೀಸರಿಗೆ (Police) ಸಿಕ್ಕಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಕಳೆದ ಕೆಲ ದಿನಗಳಿಂದ ಬಿಜಾಪುರ,ಬೀದರ್, ಮಂಗಳೂರಿನಲ್ಲಿ ನಡೆದ ದರೋಡೆ ಪ್ರಕರಣಗಳೇ ಸಾಕ್ಷಿ.ಅದರಲ್ಲೂ ಮಂಗಳೂರಿನ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ನಡೆದ ದರೋಡೆ ರಾಜ್ಯದಲ್ಲೇ ಅತೀ ದೊಡ್ಡ ದರೋಡೆ ಪ್ರಕರಣವಾಗಿದೆ.
ಬ್ಯಾಂಕ್‌ನಲ್ಲಿದ್ದ ಸುಮಾರು 10 ಕೋಟಿಗೂ ಅಧಿಕ ಮೌಲ್ಯದ ಹಣ, ಚಿನ್ನಾಭರಣವನ್ನು ಹಾಡಹಗಲಲ್ಲೇ ದರೋಡೆ ಮಾಡಲಾಗಿದ್ದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ದರೋಡೆ ನಡೆದು ದಿನ ಕಳೆದರೂ ಈವರೆಗೂ ಆರೋಪಿಗಳ ಒಂದೇ ಒಂದು ಸುಳಿವು ಸಿಕ್ಕಿಲ್ಲ. ಭಾರೀ ಪ್ಲಾನ್ ಮಾಡಿಕೊಂಡೇ ದರೋಡೆಗೆ ಬಂದಿದ್ದ ದರೋಡೆಕೋರರು, ಪರಾರಿಯಾಗಲು ಅಷ್ಟೇ ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ದರೋಡೆ ಮಾಡಲು ಸ್ಥಳೀಯ ವ್ಯಕ್ತಿಯೋರ್ವನ ಸಹಕಾರ ಇದೆ ಎಂಬ ಸ್ಪೋಟಕ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಂಗಳೂರು ಬ್ಯಾಂಕ್ ಲೂಟಿ – ಕೇರಳದಿಂದ ಬೋಟ್‌ನಲ್ಲಿ ತಮಿಳುನಾಡಿಗೆ ತೆರಳಿದ್ರಾ ಖದೀಮರು?
ಈ ಬ್ಯಾಂಕಿನ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಸ್ಥಳೀಯ ವ್ಯಕ್ತಿಯೇ ಈ ದರೋಡೆಯ ಮಾಸ್ಟರ್ ಮೈಂಡ್ ಎನ್ನುವುದು ಪೊಲೀಸರಿಗೆ ಸಿಕ್ಕಿರುವ ಸದ್ಯದ ಮಾಹಿತಿ. ಇದಕ್ಕೆ ಪೂರಕವೆಂಬಂತೆ ಸಿಸಿ ಕ್ಯಾಮೆರಾ ಡಿವಿಆರ್ ಬದಲಾಯಿಸುವ ದಿನ, ಚಿನ್ನ ಪರಿವೀಕ್ಷಕ ಲಾಕರ್ ಓಪನ್ ಮಾಡುವ ಸಮಯ, ದರೋಡೆ ಮಾಡಲು ನಿಗದಿಮಾಡಿದ್ದ ದಿನ ಶುಕ್ರವಾರ ಮಧ್ಯಾಹ್ನ 1 ಗಂಟೆ.
ಬ್ಯಾಂಕ್ ಆಸುಪಾಸಿನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದು ಶುಕ್ರವಾರ ಮಧ್ಯಾಹ್ನ 1 ರಿಂದ 1:30 ರೊಳಗೆ ಅಂಗಡಿಯ ವ್ಯಾಪಾರಿಗಳು ಮಸೀದಿಗೆ ನಮಾಜ್‌ಗೆ ಹೋಗುತ್ತಾರೆ. ಹೀಗಾಗಿ ಕೇವಲ 5 ನಿಮಿಷದಲ್ಲೇ ಸಿಕ್ಕಿದ ಚಿನ್ನಾಭರಣವನ್ನು ದೋಚಿಕೊಂಡು ಬರೋ ಪ್ಲಾನ್ ಮಾಡಿದ್ದಾರೆ. ಅದರಂತೆ ಸರಿಯಾಗಿ 1 ಗಂಟೆ 10 ನಿಮಿಷಕ್ಕೆ ಬಂದ ದರೋಡೆಕೋರರು 1 ಗಂಟೆ 16 ನಿಮಿಷಕ್ಕೆ ಚಿನ್ನಾಭರಣವನ್ನು ಗೋಣಿ ಚೀಲಕ್ಕೆ ಹಾಕಿ ಕಾರಿಗೆ ತುಂಬಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಹಲವೆಡೆ ಬೆಳಗ್ಗೆಯೇ ತುಂತುರು ಮಳೆ
ಬ್ಯಾಂಕ್ ದರೋಡೆ ಮಾಡಲು ಬೇಕಾದ ಎಲ್ಲಾ ಮಾಹಿತಿಯನ್ನ ಸ್ಥಳೀಯ ವ್ಯಕ್ತಿಯೇ ಮಾಡಿದ್ದಾನೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಆ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಆತನನನ್ನು ವಶಕ್ಕೆ ಪಡೆಯಲು ಹುಡುಕಾಟ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಈ ದರೋಡೆಯ ಹಿಂದೆ ಸ್ಥಳೀಯರ ಕೈವಾಡ ಇದೆ ಎಂಬ ಅನುಮಾನ ನಿಜವಾಗುವ ಸಾಧ್ಯತೆಯಿದೆ.