– ಕೋರ್ಟ್ ವಿಚಾರಣೆಯಲ್ಲಿ ತಲೆ ಬಗ್ಗಿಸಿ ನಿಂತಿದ್ದ ಬಾಂಬರ್
– ಆದಿತ್ಯನನ್ನು ಕುತೂಹಲದಿಂದ ನೋಡಿದ ಜನ
– ನ್ಯಾಯಾಧೀಶರ ಎದುರು ತಪ್ಪೊಪ್ಪಿಕೊಂಡ ಬಾಂಬರ್
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್‍ನನ್ನು ಪೊಲೀಸರು ವಿಚಾರಣೆ ನಡೆಸಿ, ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಈ ವೇಳೆ ಆರೋಪಿಯು ಅನೇಕ ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.
ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರ ನೇತೃತ್ವದಲ್ಲಿ ಬಾಂಬರ್ ಆದಿತ್ಯರಾವ್‍ನನ್ನು ತಡರಾತ್ರಿ ತಡರಾತ್ರಿ 2 ಗಂಟೆಯವರೆಗೂ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿಯು ಸ್ಫೋಟಕ ರಹಸ್ಯ ಬಹಿರಂಗ ಪಡಿಸಿದ್ದಾನೆ. ಸರಿಯಾದ ಕೆಲಸವಿಲ್ಲದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದೆ. ಆಗ ಯೂಟ್ಯೂಬ್‍ನಲ್ಲಿ ಉಗ್ರರ ವಿಡಿಯೋ ನೋಡಿ ಪ್ರಭಾವಿತನಾಗಿದ್ದೆ. ಬಳಿಕ ವಿಮಾನಯಾನ ಇಲಾಖೆ ವಿರುದ್ಧ ಪ್ರತೀಕಾರಕ್ಕಾಗಿಯೇ ವಿಧ್ವಂಸಕ ಕೃತ್ಯ ಎಸಗಿರುವುದಾಗಿ ಆದಿತ್ಯರಾವ್ ಹೇಳಿಕೊಂಡಿದ್ದಾನೆ.
Advertisement
Advertisement
ಯೂಟ್ಯೂಬ್ ವಿಡಿಯೋ ನೋಡಿಕೊಂಡು ಬಾಂಬ್ ತಯಾರಿಕೆಗಾಗಿ ಎರಡು ತಿಂಗಳಿನಿಂದ ಪೂರ್ವಸಿದ್ಧತೆ ನಡೆಸಿದ್ದೆ. ಸಮಾಜದ ವ್ಯವಸ್ಥೆ ಬಗ್ಗೆ ನನಗೆ ಆಕ್ರೋಶವಿತ್ತು. ಹೀಗಾಗಿಯೇ ಬಾಂಬ್ ದಾಳಿ ನಡೆಸಿದೆ ಎಂದು ಆದಿತ್ಯರಾವ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
Advertisement
ಮತ್ತೊಂದು ಪ್ರಕರಣ ದಾಖಲು:
ಮಂಗಳೂರಿನಿಂದ ಹೈದ್ರಾಬಾದ್‍ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿದ್ದೀನೆ ಎಂದು ಆದಿತ್ಯರಾವ್ ಹುಸಿ ಕರೆ ಮಾಡಿದ್ದ. ಈ ಸಂಬಂಧ ಏರ್‍ಪೋರ್ಟ್ ಸಿಬ್ಬಂದಿ ಅಬ್ದುಲ್ ಹಮೀದ್ ದೂರು ನೀಡಿದ್ದರು. ಈ ಆಧಾರದ ಮೇಲೆ ಆರೋಪಿ ಆದಿತ್ಯನ ವಿರುದ್ಧ ಬಚ್ಪೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‍ಐಆರ್ ದಾಖಲಾಗಿದೆ.
Advertisement
ಸ್ಪೆಷಲ್ ಸೆಲ್‍ನಲ್ಲಿ ಇರಿಸಿದ್ದ ಬಾಂಬರ್ ಆದಿತ್ಯಾರಾವ್‍ಗೆ ಭದ್ರತೆ ನೀಡಲು ಮುಲ್ಕಿ ಪಿಎಸ್‍ಐ ಶೀತಲ್ ಕುಮಾರ್, ಬಜ್ಪೆ ಪಿಎಸ್‍ಐ ಪುನೀತ್ ಕುಮಾರ್ ಹಾಗೂ 10 ಪೇದೆಗಳನ್ನು ನಿಯೋಜಿಸಲಾಗಿತ್ತು. ಠಾಣೆಯಲ್ಲಿದ್ದ ಆದಿತ್ಯ ಆಗಾಗ್ಗೆ ಎದ್ದು ಮತ್ತೆ ಮಲಗುತ್ತಿದ್ದ.
ಬಾಂಬರ್ ಆದಿತ್ಯನನ್ನು ಇಂದು ಬೆಳಗ್ಗೆ ಹಾಗೂ ಮಧ್ಯಾಹ್ನ ಅಂತಿಮ ಹಂತದ ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮೂರು ಗಂಟೆಗೆ ಮಂಗಳೂರು 6ನೇ ಜೆಎಂಎಫ್‍ಸಿ ಕೋರ್ಟ್‍ಗೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಲಯದಲ್ಲಿ ಭಾರೀ ಭಧ್ರತೆ ಕಲ್ಪಿಸಲಾಗಿತ್ತು. ಆರೋಪಿಯನ್ನ ನೋಡಲು ಕುತೂಹಲದಿಂದ ನೂರಾರು ಜನರು ಕೋರ್ಟ್ ಆವರಣದಲ್ಲಿ ಜಮಾಯಿಸಿದರು. ವಿಶೇಷವೆಂದರೆ ಸಾರ್ವಜನಿಕರಿಗಿಂತ ಜಾಸ್ತಿ ವಕೀಲರು ಆರೋಪಿಯನ್ನು ನೋಡಲು ಸೇರಿದ್ದರು.
ಜೆಎಮ್‍ಎಫ್‍ಸಿ 6 ಕೋರ್ಟ್ ನ್ಯಾಯಾಧೀಶ ಕಿಶೋರ್ ಕುಮಾರ್ ಕೆ.ಎನ್ ಅವರ ಮುಂದೆ ಆದಿತ್ಯರಾವ್‍ನನ್ನು ಪೊಲೀಸರು ಹಾಜರುಪಡಿಸಿದರು. ಈ ವೇಳೆ 15 ದಿನ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದರು.
ಆದಿತ್ಯ ರಾವ್ ಕೋರ್ಟ್ ವಿಚಾರಣೆ ವೇಳೆ ಯಾವುದೇ ಭಾವನೆ ವ್ಯಕ್ತಪಡಿಸದೆ, ಕೈಕಟ್ಟಿ ತಲೆ ತಲೆ ಬಗ್ಗಿಸಿ ನಿಂತಿದ್ದ. ಆಗ ನ್ಯಾಯಾಧೀಶರು, ಪೊಲೀಸರು ನಿನಗೆ ಕಿರುಕುಳ ನೀಡಿದ್ದಾರಾ? ಕಸ್ಟಡಿಯಲ್ಲಿ ನಿನಗೆ ಹೊಡೆದಿದ್ದಾರಾ? ನಿನ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಯಾವಾಗ ಎಂದು ಪ್ರಶ್ನಿಸಿದರು.
ಬಳಿಕ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಧೀಶರು, ಆರೋಗ್ಯ ಸರಿ ಇದೆಯಾ ಎಂದು ಆದಿತ್ಯ ರಾವ್‍ನನ್ನಿ ಕೇಳಿದರು. ಆಗ ಆರೋಪಿಯು ಸರಿ ಇದೆ ಸರ್ ಎಂದು ಉತ್ತರಿಸಿದ. ಆಗ ನ್ಯಾಯಾಧೀಶರು ಏನಾದರೂ ಹೇಳಲಿಕ್ಕೆ ಇದೆಯಾ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆರೋಪಿ ಏನು ಇಲ್ಲ ಸರ್. ನಾನು ಮಾಡಿದ್ದೆಲ್ಲಾ ತಪ್ಪು ಎಂದು ಒಪ್ಪಿಕೊಂಡ.
ಸರ್ಕಾರದ ಪರ ಸರ್ಕಾರಿ ವಕೀಲ ನಾರಾಯಣ ಹರಿ ವಕಾಲತು ವಹಿಸಿದ್ದಾರೆ. ಹೀಗಾಗಿ ನಿನ್ನ ಪರ ಯಾರಾದರು ವಕಾಲತ್ತು ವಹಿಸ್ತಾರಾ ಎಂದು ನ್ಯಾಯಾಧೀಶರು ಆರೋಪಿಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಬಾಂಬರ್, ಇಲ್ಲ ಸರ್. ಯಾರೂ ಇಲ್ಲ ಎಂದು ತಿಳಿಸಿದ.
ಬಾಂಬರ್ ಆದಿತ್ಯ ರಾವ್ ಚೆನ್ನೈಗೆ:
ಆರೋಪಿ ಆದಿತ್ಯ ರಾವ್ ಚೆನ್ನೈನಿಂದ ಜಿಲೆಟಿನ್, ಡಿಟೋನೇಟರ್ ತರಿಸಿದ್ದ. ಹೀಗಾಗಿ ಆ ಜಾಲವನ್ನು ಪತ್ತೆ ಹಚ್ಚುವುದಕ್ಕಾಗಿ ಆರೋಪಿಯನ್ನು 15 ದಿನ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಕೋರ್ಟ್ ಗೆ ಮನವಿ ಮಾಡಿಕೊಂಡರು. ಆದರೆ ನ್ಯಾಯಾಧೀಶರು, 10 ದಿನದೊಳಗೆ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದರು.