ಮಂಗಳೂರು: ಪಡೀಲ್‍ನಲ್ಲಿ ನಡೆದಿದ್ದ ಹೋಂ ಸ್ಟೇ ಮೇಲಿನ ದಾಳಿ ಪ್ರಕರಣದ (Homestay Attack Case) ಎಲ್ಲಾ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಪ್ರಕರಣವನ್ನು 12 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಪ್ರಕರಣದ ಎಲ್ಲಾ 40 ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಯುವಕ ಯುವತಿಯರು ಹೋಂ ಸ್ಟೇನಲ್ಲಿ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿ ಹಿಂದೂಪರ ಸಂಘಟನೆಯ ನೂರಾರು ಕಾರ್ಯಕರ್ತರಿಂದ ದಾಳಿ ನಡೆದಿತ್ತು ಎಂದು ಆರೊಪಿಸಲಾಗಿತ್ತು. ಇದೀಗ ಪ್ರಕರಣದ ಸಾಕ್ಷಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾ.ಕಾಂತರಾಜು ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಪ್ರಕರಣದದಲ್ಲಿ ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು. ಓರ್ವ ಪತ್ರಕರ್ತ ನವೀನ್ ಸೂರಿಂಜೆ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿತ್ತು. ಉಳಿದ 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಮಂಗಳವಾರ (ಆ.8) ಕೋರ್ಟ್ ಆದೇಶಿಸಿದೆ.
ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿತ್ತು.
2012ರ ಜುಲೈ 28 ರಂದು ಮಂಗಳೂರಿನ ಹೋಂ ಸ್ಟೇ ಮೇಲೆ ದಾಳಿ ನಡೆದಿತ್ತು. ಹೋಂ ಸ್ಟೇನಲ್ಲಿ ಯುವಕರು ಹಾಗೂ ಯುವತಿಯರು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ದಾಳಿ ನಡೆದಿತ್ತು.