5 ದಶಕದಿಂದ ರಾಷ್ಟ್ರ ರಾಜಧಾನಿ, ರಾಜ್ಯದ ಕಾಂಗ್ರೆಸ್ಸಿನ ಬಹುದೊಡ್ಡ ಕೊಂಡಿಯಾಗಿದ್ದ ಆಸ್ಕರ್ ಇನ್ನು ನೆನಪು ಮಾತ್ರ

Public TV
2 Min Read
OSCAR

ಮಂಗಳೂರು: ಕಳೆದ ಐದು ದಶಕಗಳಿಂದ ರಾಷ್ಟ್ರ ರಾಜಧಾನಿ ಮತ್ತು ರಾಜ್ಯದ ಕಾಂಗ್ರೆಸ್ ನಡುವೆ ಇದ್ದ ಬಹುದೊಡ್ಡ ಕೊಂಡಿ ಕಳಚಿದೆ. ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಇಹಲೋಕ ತ್ಯಜಿಸಿದ್ದಾರೆ. ಅಜಾತಶತ್ರುವನ್ನು ಕಳೆದುಕೊಂಡ ಇಡೀ ರಾಜಕೀಯ ವಲಯ ಕಂಬನಿ ಮಿಡಿದಿದೆ.

OSCAR 1

ಮೃದು ವ್ಯಕ್ತಿತ್ವ ಮೇಲೆ ಮಾಸದ ನಗು… ಅಜಾತ ಶತ್ರು ರಾಜಕಾರಣಿ ಆಸ್ಕರ್ ಫೆರ್ನಾಂಡಿಸ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಐದು ಬಾರಿ ಲೋಕಸಭೆ ಮತ್ತು ನಾಲ್ಕು ಬಾರಿ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಕರ್ನಾಟಕ ಕಾಂಗ್ರೆಸ್ಸಿನಿಂದ ದೆಹಲಿಯಲ್ಲಿ ಛಾಪು ಮೂಡಿಸಿದ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ತನ್ನ ಬದುಕಿನ ಜೈತ್ರಯಾತ್ರೆಯನ್ನು ಕೊನೆಗೊಳಿಸಿದ್ದಾರೆ. ರಾಜಕೀಯ ವಿರೋಧಿ ಗಳಿಂದಲೂ ಗೌರವಿಸಲ್ಪಟ್ಟಿದ್ದ ಆಸ್ಕರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು ಎರಡು ತಿಂಗಳುಗಳ ಕಾಲ ಜೀವನ್ಮರಣದ ನಡುವೆ ಹೋರಾಟ ನಡೆಸಿದ ಆಸ್ಕರ್ ಪರಮಾತ್ಮನಲ್ಲಿ ಲೀನರಾಗಿದ್ದಾರೆ. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಡೆದು ಬಂದ ಹಾದಿ

oscar

ಉಡುಪಿಯ ಮುನ್ಸಿಪಾಲಿಟಿಯಿಂದ ರಾಜಕೀಯ ಆರಂಭಿಸಿ ದೆಹಲಿಯ ಸಂಸತ್ ಭವನದವರೆಗೆ ಆಸ್ಕರ್ ಅವರು ನಡೆದು ಹೋದ ದಾರಿ ಬಲು ದೊಡ್ಡದು. ದೆಹಲಿ ರಾಜಕೀಯವಲಯದಲ್ಲಿ ಕರ್ನಾಟಕದ ಅಧಿಕೃತ ಪ್ರತಿನಿಧಿಯಂತೆ ಇದ್ದ ಆಸ್ಕರ್ ಇಲ್ಲಿನ ಕಾರ್ಯಕರ್ತರಿಗೆ ಆಸ್ಕರ್ ಅಣ್ಣ ಎಂದೇ ಚಿರಪರಿಚಿತ. ಗಾಂಧಿ ಕುಟುಂಬಕ್ಕೆ ಅತಿ ಆಪ್ತನಾಗಿದ್ದ ಆಸ್ಕರ್ ಕಟ್ಟಕಡೆಯ ಕಾರ್ಯಕರ್ತನಿಗೂ ಕೈಗೆ ಸಿಗುತ್ತಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಫೆರ್ನಾಂಡಿಸ್ ಜುಲೈ 19ರಂದು ಮನೆಯಲ್ಲಿ ಯೋಗ ಮಾಡುತ್ತಿದ್ದ ಸಂದರ್ಭ ಕುಸಿದು ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದರು. ಮೆದುಳಿನಲ್ಲಿ ರಕ್ತಸ್ರಾವವಾಗಿ ಕೋಮಕ್ಕೆ ಜಾರಿದ್ದರು. ಆಸ್ಕರ್ ನಿಧನಕ್ಕೆ ರಾಜ್ಯ ರಾಷ್ಟ್ರಮಟ್ಟದ ನಾಯಕರು ಕಂಬನಿ ಮಿಡಿದಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

OSCAR FERNANDIS

ಯೋಗ, ಈಜು, ಯಕ್ಷಗಾನ, ಹುಲಿ ವೇಷ ಆಯುರ್ವೇದ ಹೀಗೆ ಆಸ್ಕರ್ ಫರ್ನಾಂಡಿಸ್ ಅವರದ್ದು ಒಂದು ವರ್ಣರಂಜಿತ ಜೀವನ. ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಮಂಗಳವಾರ ವಿಶೇಷ ಪ್ರಾರ್ಥನೆ, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮದರ್ಶನ ನಡೆಯಲಿದೆ. ಬಳಿಕ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿಗೆ ಆಸ್ಕರ್ ಫರ್ನಾಂಡಿಸ್ ಅವರ ಮೃತದೇಹವನ್ನ ರವಾನೆ ಮಾಡಲಾಗುತ್ತಿದ್ದು, ಕೇಂದ್ರದ ರಾಜ್ಯದ ಹಿರಿಯ ನಾಯಕರು ಅಂತಿಮ ದರ್ಶನ ಮಾಡಲಿದ್ದಾರೆ. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

Share This Article
Leave a Comment

Leave a Reply

Your email address will not be published. Required fields are marked *