ಉಡುಪಿ: ಕರಾವಳಿಯ ಗಾಂಧಿ ಎಂದು ಪಕ್ಷದೊಳಗೆ ಕರೆಸಿಕೊಳ್ಳುತ್ತಿದ್ದ, ಕಾಂಗ್ರೆಸ್ ಮುತ್ಸದ್ಧಿ ಹಿರಿಯ ನೇತಾರ ಆಸ್ಕರ್ ಫರ್ನಾಂಡಿಸ್ ಕೊನೆಯುಸಿರೆಳೆದಿದ್ದಾರೆ. ಒಂಬತ್ತು ಬಾರಿ ಲೋಕಸಭೆ ಮತ್ತು ರಾಜ್ಯಸಭೆಗೆ ಆಸ್ಕರ್ ಆಯ್ಕೆಯಾಗಿದ್ದರು.
ಆಸ್ಕರ್ ಫರ್ನಾಂಡಿಸ್ 1941ರ ಮಾರ್ಚ್ 27 ರಂದು ಜನಿಸಿದ್ದರು. ತಂದೆ ರೋಕೀ ಫರ್ನಾಂಡಿಸ್ ಅಧ್ಯಾಪಕರಾಗಿದ್ದರು. ತಾಯಿ ಲಿಯೋನಿಸ್ಸಾ ಫರ್ನಾಂಡಿಸ್ ಪ್ರಗತಿಶೀಲ ಮಹಿಳೆ. ರೋಕಿಯವರ 12 ಮಕ್ಕಳಲ್ಲಿ ಒಬ್ಬರು ಓಸ್ಕರ್. ತಂದೆ ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ ಹೋರಾಟಗಾರರಾಗಿದ್ದರು. ತಾಯಿ ಲಿಯೋನಿಸ್ಸಾ ಫರ್ನಾಂಡಿಸ್ ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಬೆಂಚ್ ಮ್ಯಾಜಿಸ್ಟ್ರೇಟ್ ಆಗಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ
ಆಸ್ಕರ್ ಫರ್ನಾಂಡಿಸ್ ಪ್ರೌಢ ಶಿಕ್ಷಣ ಬೋರ್ಡ್ ಹೈಸ್ಕೂಲಿನಲ್ಲಿ ನಡೆಯಿತು. ಮುಂದೆ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಮೂಲತ: ಆಸ್ಕರ್ ಕೃಷಿಕರಾಗಿದ್ದರು. ಜನ ನಾಯಕನಾದ ಮೇಲೂ ಗದ್ದೆ ಉಳುಮೆ ಮಾಡುತ್ತಿದ್ದರು. ಕೆಲಕಾಲ ಭಾರತೀಯ ಜೀವವಿಮಾ ನಿಗಮದ ಉದ್ಯೋಗಿಯಾಗಿ ದುಡಿಮೆ ಮಾಡಿದ್ದರು. 1972 ರಲ್ಲಿ ಉಡುಪಿ ಮುನ್ಸಿಪಾಲಿಟಿಯ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದ ಆಸ್ಕರ್, ಬ್ಲಾಸಂ ಫರ್ನಾಂಡಿಸ್ ರನ್ನು ವಿವಾಹ ಆಗಿದ್ದಾರೆ. ಆಮೇಲೆ ಅವರು ರಾಷ್ಟ್ರ ರಾಜಧಾನಿಯತ್ತ ಪಯಣ ಮಾಡಿ, ಗಾಂಧಿ ಕುಟುಂಬಕ್ಕೆ ಹತ್ತಿರರಾದರು. 1980 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ದೆಹಲಿ ರಾಜಕೀಯ ಅಲ್ಲಿಂದ ಶುರುವಾಯ್ತು. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ
ಉಡುಪಿ ಸಂಸದರಾಗಿ 1980, 1984, 1989, 1991, 1996ರಲ್ಲಿ ಆಯ್ಕೆಯಾದರು. ಒಟ್ಟು ಐದು ಬಾರಿ ಉಡುಪಿಯನ್ನು ಪ್ರತಿನಿಧಿಸಿದ್ದು, 1998 ರಲ್ಲಿ ಅಲ್ಪ ಮತಗಳ ಅಂತರದಿಂದ ಐಎಂ ಜಯರಾಮ ಶೆಟ್ಟಿ ವಿರುದ್ಧ ಸೋಲು ಅನುಭವಿಸಿದರು. ಬಳಿಕ ರಾಜ್ಯಸಭಾ ಸದಸ್ಯರಾಗಿ ರಾಜ್ಯಸಭಾ ಸದಸ್ಯನಾಗಿ ರಾಜಕೀಯ ಮುಂದುವರೆಸಿದರು. 1998 ರಿಂದ ಒಟ್ಟು ನಾಲ್ಕನೇ ಬಾರಿ ರಾಜ್ಯಸಭೆ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಹಾಗೂ ಸರ್ಕಾರದಲ್ಲಿ ವಿವಿಧ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದರು. 1983ರಲ್ಲಿ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು 1985 ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗುತ್ತಾರೆ.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ನಂಬಿಕೆಯ ನಾಯಕನಾಗಿ ಗುರುತಿಸಲ್ಪಡುತ್ತಾರೆ. 1986 ರಲ್ಲಿ ಕನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದರು. ಕೇಂದ್ರದ ರಾಷ್ಟ್ರೀಯ ಹೆದ್ದಾರಿ, ಅಂಕಿ ಅಂಶ, ಯುವಜನ ಸೇವೆ, ಕ್ರೀಡೆ ಹಾಗೂ ಕಾರ್ಮಿಕ ಸಚಿವರಾಗಿ 2004-2009ರ ತನಕ ಸೇವೆ ಸಲ್ಲಿಸಿದ್ದಾರೆ. ಉಡುಪಿಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಸ್ಕರ್, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವಾಗಲೇ ಆಸ್ಕರ್ ಫರ್ನಾಂಡಿಸ್ ಇಹಲೋಕದ ಪಯಣ ಮುಗಿಸಿದ್ದಾರೆ.