ಮಂಗಳೂರು: ಫೋನ್ ಸಂಭಾಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಈ ಸಂಬಂಧ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಡಿಕೆಶಿ ಮಾಧ್ಯಮಗಳ ಜೊತೆ ಮಾತನಾಡಿದರು. ನಾನು ಇಂಧನ ಸಚಿವನಾಗಿದ್ದಾಗ ಯಾರೋ ಒಬ್ಬ ತರ್ಲೆ ಫೋನ್ ಮಾಡಿದ್ದ. ನನ್ನ ಜೊತೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಅವಾಚ್ಯ ಶಬ್ದಗಳಿಂದ ನನಗೆ ಬೈದಿದ್ದ. ನಮ್ಮ ಅಧಿಕಾರಿಗಳು ಅವನ ವಿರುದ್ಧ ದೂರು ನೀಡಿದ್ದರು. ಈ ವೇಳೆ ಅಧಿಕಾರಿಗಳಿಗೂ ಬಾಯಿಗೆ ಬಂದ ಹಾಗೇ ಬೈದಿದ್ದ ಎಂದರು.
ಈ ವಿಚಾರವಾಗಿ ಸಾಕ್ಷಿ ಹೇಳಲು ಬರಬೇಕು ಅಂತಾ ನ್ಯಾಯಾಲಯ ಹೇಳಿತ್ತು. ಪ್ರಾರಂಭದಲ್ಲಿ ನನಗೂ ಈ ಬಗ್ಗೆ ಗೊತ್ತಾಗಲಿಲ್ಲ. ನಮಗೆಲ್ಲಾ ಈ ವಿಚಾರದಲ್ಲಿ ಸ್ವಲ್ಪ ತಿಳುವಳಿಕೆ ಕಡಿಮೆ. ಲುಕ್ ಔಟ್ ನೋಟಿಸ್, ಪೇಪರ್ ನಲ್ಲಿ ಹಾಕ್ತೇವೆ ಆರ್ಡರ್ ಮಾಡಿದ್ದಾರೆ ಅಂತಾ ಗೊತ್ತಾಯ್ತು. ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ. ನಾವೇ ಕಾನೂನು ಮಾಡಿದವರು, ಕಾನೂನಿಗೆ ಬೆಲೆ ನೀಡದಿದ್ದರೆ ಹೇಗೆ ಎಂದು ಡಿಕೆಶಿ ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದು, ನಾಳೆ ಮಳೆ ಸಾಧ್ಯತೆ-ಯೆಲ್ಲೋ ಅಲರ್ಟ್ ಘೋಷಣೆ
ಏನಿದು ಘಟನೆ..?
ಡಿಕೆಶಿಯವರು ಇಂದನ ಸಚಿವರಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆಯ ಬಗ್ಗೆ ಬೆಳ್ಳಾರೆಯ ವ್ಯಕ್ತಿಯೊಬ್ಬರು ಡಿಕೆಶಿಗೆ ಫೋನ್ ಮಾಡಿದ್ದರು. ಈ ವೇಳೆ ಡಿಕೆಶಿ ಹಾಗೂ ವ್ಯಕ್ತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಸಂಭಾಷಣೆಯ ಪ್ರಕರಣ ಸಂಬಂಧ ಸಾಕ್ಷ್ಯ ಹೇಳಲು ಡಿಕೆಶಿ ಅವರಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಡಿಕೆಶಿ ಮಾತ್ರ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಳ್ಯ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು. ಇದನ್ನೂ ಓದಿ: ಸಿದ್ದರಾಮಯ್ಯಗೆ ದಿಢೀರ್ ದೆಹಲಿ ಬುಲಾವ್ – ಡಿಕೆಶಿ, ಸಿದ್ದು ಜಿದ್ದಿಗೆ ಬೀಳುತ್ತಾ ಬ್ರೇಕ್..?
ಕೋರ್ಟಿಗೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿಕೆಶಿ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲು ಐಜಿಪಿ ಹಾಗೂ ಡಿಐಜಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಇಂದು ಕೋರ್ಟಿಗೆ ಹಾಜರಾಗಲು ಮಂಗಳೂರಿಗೆ ಬಂದಿದ್ದಾರೆ.