ಮಂಗಳೂರು: ಡಿಸೆಂಬರ್ 19 ರಂದು ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವೇಳೆ ಗೋಲಿಬಾರ್ ನಲ್ಲಿ ಸಾವನ್ನಪ್ಪಿದ ಇಬ್ಬರ ವಿರುದ್ಧವೂ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಗೋಲಿಬಾರ್ ನಲ್ಲಿ ಸಾವನ್ನಪ್ಪಿದ ಮಂಗಳೂರಿನ ಕಂದುಕ ನಿವಾಸಿ ಜಲೀಲ್ ಹಾಗೂ ಕುದ್ರೋಳಿ ನಿವಾಸಿ ನೌಸೀಮ್ ಸೇರಿ ಒಟ್ಟು 29 ಮಂದಿ ಪ್ರತಿಭಟನಾಕಾರರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಗೋಲಿಬಾರ್ ನಲ್ಲಿ ಮೃತರಾದ ಜಲೀಲ್ (ಎ3) ಹಾಗೂ ಮೃತ ನೌಶೀನ್ ಆರೋಪಿ (ಎ8) ಎಂದು ಎಫ್‍ಐಆರ್ ನಲ್ಲಿ ದಾಖಲಾಗಿದೆ.
ಹಿಂಸಾಚಾರದ ವೇಳೆ ಸುಮಾರು 1,500 ರಿಂದ 2000 ಪ್ರತಿಭಟನಾ ಯುವಕರ ಗುಂಪು 144 ಸೆಕ್ಷನ್ ಅನ್ನು ಉಲ್ಲಂಘಿಸಿ ಮಾರಕಾಸ್ತ್ರಗಳಾದ ಜಲ್ಲಿಕಲ್ಲು, ದೊಣ್ಣೆ, ಸೋಡಾಬಾಟಲಿ, ತುಂಡಾದ ಗಾಜುಗಳನ್ನು ಎಸೆಯುತ್ತಾ ಮಂಗಳೂರು ಬಂದರು ಪೊಲೀಸ್ ಠಾಣೆಗೆ ದಾಳಿ ಮಾಡಿ ಬೆಂಕಿ ಹಚ್ಚುವ ಯತ್ನ ಮಾಡಿದ್ದು ಜೊತೆಗೆ ಪೊಲೀಸರನ್ನು ಕೊಲ್ಲುವ ಸಂಚು ರೂಪಿಸಿ ಬಂದಿದ್ದರು ಎಂದು ಮಂಗಳೂರು ಕಾನೂನು ಹಾಗೂ ಸುವ್ಯವಸ್ಥೆ ಡಿಸಿಪಿ ಅರುಣಾಂಕ್ಷುಗಿರಿ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ದೂರಿನಲ್ಲಿ ಮೃತ ಜಲೀಲ್ ಹಾಗೂ ನೌಶೀನ್ ಪ್ರತಿಭಟನಾ ಹಿಂಸಾಚಾರದಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಲಾಗಿದ್ದು, ಇತರೆ ಪ್ರತಿಭಟನಾಕಾರರನ್ನೂ ಪೊಲೀಸರು ಗುರುತಿಸಿದ್ದು ಅದರಲ್ಲಿ ಒಟ್ಟು 29 ಜನ ಪ್ರತಿಭಟನಾಕಾರರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.