ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯಿಂದ ನಾಪತ್ತೆಯಾಗಿ ಹೈಡ್ರಾಮಾ ಸೃಷ್ಟಿಸಿದ್ದ ಕೊರೊನಾ ಶಂಕಿತನನ್ನು ಕೊನೆಗೂ ಪತ್ತೆ ಮಾಡಲಾಗಿದೆ.
ಮಂಗಳೂರು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದ ವ್ಯಕ್ತಿ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ರಂಗರಮಜಲು ಗ್ರಾಮದ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ. ಬಂಟ್ವಾಳ ಪೊಲೀಸರು, ವೈದ್ಯಾಧಿಕಾರಿಗಳಿಂದ ಶಂಕಿತನನ್ನು ಮನವೊಲಿಸಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
Advertisement
Advertisement
ಭಾನುವಾರ ತಡರಾತ್ರಿ ದುಬೈನಿಂದ ಮಂಗಳೂರಿಗೆ ಬಂದಿಳಿದ ವ್ಯಕ್ತಿಯಲ್ಲಿ ಜ್ವರ ಕಂಡುಬಂದಿತ್ತು. ಕೂಡಲೇ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಐಸೋಲೇಷನ್ ವಾರ್ಡ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಬೆಳಗಿನ ಜಾವ ಆ ಶಂಕಿತ ವ್ಯಕ್ತಿ ಆಸ್ಪತ್ರೆಯಿಂದ ಪರಾರಿಯಾಗಿದ್ದ.
Advertisement
ನಡೆದಿದ್ದು ಏನು?
ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮೂಲಕ ಪ್ರಯಾಣಿಕರ ಟೆಂಪರೇಚರ್ ಚಕ್ ಮಾಡಲಾಗುತ್ತಿತ್ತು. ಅದೇ ರೀತಿ ನಿನ್ನೆ ರಾತ್ರಿ ದುಬೈನಿಂದ ಮಂಗಳೂರಿಗೆ ಆಗಮಿಸಿದ ಓರ್ವ ಪ್ರಯಾಣಿಕನ ಉಷ್ಣಾಂಶ ಹೆಚ್ಚು ಕಂಡುಬಂದಿದೆ. ತಕ್ಷಣ ಆತನನ್ನು ವೈದ್ಯರು ತಪಾಸಣೆ ಮಾಡಿದಾಗ ಆತನಿಗೆ ಜ್ವರ ಇರೋದು ಕಂಡು ಬಂದಿದೆ. ಅಲ್ಲಿಂದ ಅಂಬುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Advertisement
ಆಸ್ಪತ್ರೆಯ ಐಸೋಲೇಶನ್ ವಾರ್ಡ್ ಗೆ ಆತನನ್ನು ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗಿತ್ತು. ಆತನ ರಕ್ತದ ಮಾದರಿಯನ್ನು ಸಂಗ್ರಹಿಸಲು ಮುಂದಾಗಿದ್ದರು. ಆದ್ರೆ ಆತ ರಕ್ತ ಕೊಡಲು ಒಪ್ಪಿರಲಿಲ್ಲ. ಬೆಳಗ್ಗೆ ಆತನ ರಕ್ತದ ಮಾದರಿಯನ್ನು ಸಂಗ್ರಹಿಸಿದರೆ ಸಾಕು ಅಂತಾ ಇದ್ದರು. ಆದ್ರೆ ಇಂದು ಮುಂಜಾನೆ ಐಸೋಲೇಶನ್ ವಾರ್ಡ್ ನಿಂದ ಆತ ಪರಾರಿಯಾಗಿದ್ದ.
ಮಂಗಳೂರು ಹೊರವಲಯದ ನಿವಾಸಿಯಾಗಿದ್ದ ಆತನ ಮನೆಗೆ ಆರೋಗ್ಯಧಿಕಾರಿಗಳು ಹೋಗಿದ್ದಾರೆ. ಆದ್ರೆ ಅವರ ಮನೆಯವರು ಮತ್ತು ಸ್ಥಳೀಯರು ಆರೋಗ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿ ಪೊಲೀಸರೊಂದಿಗೆ ಆತನ ಮನೆ ಬಳಿ ಹೋದಾಗ ಮನೆಗೆ ಬೀಗ ಹಾಕಿಕೊಂಡು ಮನೆಯವರೆಲ್ಲಾ ಎಲ್ಲೋ ಹೋಗಿದ್ದರು. ನಂತರ ಪೊಲೀಸರು ಆತನ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಆತ ಬಂಟ್ವಾಳದ ವಿಟ್ಲ ಬಳಿಯ ಸಂಬಂಧಿಕರ ಮನೆಯಲ್ಲಿರುವುದು ತಿಳಿದು ಬಂತು. ಬಳಿಕ ಪೊಲೀಸರು ಆರೋಗ್ಯಾಧಿಕಾರಿಗಳು ಆತನ ಮನವೊಲಿಸಿ ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಪರೀಕ್ಷೆಯ ವರದಿಗಳು ಬರುವವರೆಗೂ ಆಸ್ಪತ್ರೆಯಲ್ಲಿ ಇರುವಂತೆ ವಿನಂತಿಸಿಕೊಂಡಿದ್ದಾರೆ.