ಬೆಂಗಳೂರು: ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸೌಹಾರ್ಧತೆಗೆ ಧಕ್ಕೆ ಬಂದಿದೆ. ಹೀಗಾಗಿ ರಾಜ್ಯದಲ್ಲಿ ಸರ್ಕಾರ ಇದ್ಯಾ ಎಂದು ಪ್ರಶ್ನೆ ಮಾಡುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಒಂದು ಬಾರಿ ಏಳುತ್ತದೆ, ಮತ್ತೊಂದು ಬಾರಿ ಮಲಗುತ್ತಿದೆ ಹೀಗಾಗಿ ಸಿಎಂ ಸಿದ್ದರಾಮಯ್ಯ ಅನ್ನೋದಕ್ಕಿಂತ ಅವರನ್ನು ನಿದ್ದೆರಾಮಯ್ಯ ಎನ್ನುವ ವಿಶ್ಲೇಷಣೆಗಳು ಸಹ ಬರುತ್ತಿವೆ ಎಂದು ಎಚ್‍ಡಿಕೆ ಹೇಳಿದರು.
Advertisement
ಬಿಜೆಪಿ, ಹಾಗೂ ಕಾಂಗ್ರೆಸ್ ನಾಯಕರು ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಮ್ಮ ರಾಜಕೀಯ ಲಾಭಕ್ಕೆ ಅಥವಾ ಶಕ್ತಿ ವೃದ್ಧಿಸಿಕೊಳ್ಳಲು ಅಮಾಯಕ ಕುಟುಂಬಗಳನ್ನು ಬಲಿ ತೆಗೆದುಕೊಳ್ಳಬೇಡಿ ಎಂದರು.
Advertisement
ಗುಪ್ತಚರ ಇಲಾಖೆ ಡಿಜಿಪಿ ಮಂಗಳೂರಿನ ವಿಷಯವನ್ನ ಸಿಎಂ ಅವರಿಗೆ ತಿಳಿಸಿಲ್ವಾ, ಇದನ್ನು ಸರ್ಕಾರ ಅಂತ ಕರಿಬೇಕಾ.? ಕುಮಾರಸ್ವಾಮಿಗೆ ಜೈಲಿಗೆ ಕಳುಹಿಸ್ತಿನಿ ನನಗೆ ಅಧಿಕಾರ ಕೊಡಿ ಅಂತ ಹೇಳೋಕೆ ಗುಪ್ತಚರ ಇಲಾಖೆಯ ಐಜಿ ಇದ್ದಾರೋ ಅಥವಾ ಇಲ್ವಾ.? ಸುಳ್ಳು ಸರ್ಟಿಫಿಕೇಟ್ ಕೊಟ್ಟು ಕೆಲಸ ಗಿಟ್ಟಿಸಿಕೊಂಡ ಅವರನ್ನು ಸಭೆಯಲ್ಲಿ ಕುರಿಸಿಕೊಂಡು ಅಂಥವರಿಂದ ಆದೇಶ ಕೊಡಿಸ್ತಾ ಇದ್ದೀರಾ.? ಇದನ್ನು ಹಿರಿಯ ಅಧಿಕಾರಿಗಳು ಕೇಳಬೇಕಾ.? ನನಗೆ ಕೆಲಸ ಮಾಡಲು ಆಗೋದಿಲ್ಲ ಎಂದು ವಿಆರ್‍ಎಸ್ ಕೊಟ್ಟವರಿಂದ ಪಲೀಸ್ ಇಲಾಖೆ ಆಡಳಿತ ನಡೆಸ್ತಾ ಇದ್ದೀರಾ.? ಎಂದು ಸಿಎಂ ಅವರನ್ನು ಪ್ರಶ್ನಿಸಿದರು.
Advertisement
ಶೋಭಾ ಕರಂದ್ಲಾಜೆ ಅವರು ದಕ್ಷಿಣ ಕನ್ನಡದವರು. ತಾಯಿ ಹೃದಯ ಇರಬೇಕಾದ ಹೆಣ್ಣು ಮಗಳು ಷಂಡರಾ ಎನ್ನುವ ರೀತಿಯಲ್ಲಿ ಮಾತಾಡೋದು ಸರಿನಾ.? ಜನಪ್ರತಿನಿಧಿಗಳಾಗಿ ನೀವು ಸಾಮರಸ್ಯ ಮೂಡಿಸಬೇಕೆ ಹೊರತು ಹೇಳಿಕೆ ಕೊಟ್ಟು ಪ್ರೇರೇಪಿಸುವುದು ಅಲ್ಲ ಎಂದು ಕರಂದ್ಲಾಜೆ ಅವರ ಹೇಳಿಕೆಗೆ ಎಚ್‍ಡಿಕೆ ಪ್ರತಿಕ್ರಿಯಿಸಿದರು.
Advertisement
ಮರಳು ದಂಧೆ, ಅಕ್ರಮ ಲಾಟರಿಗೆ ಕುಮ್ಮಕ್ಕು, ಮರಳು ದಂಧೆ ತಡೆಯಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ನಡೆದ್ರೂ ಅಂತಹ ಅಧಿಕಾರಿಗಳಿಗೆ ರಕ್ಷಣೆ ಕೊಟ್ಟಿದ್ದೀರಾ.? ಕಲ್ಲಪ್ಪ ಹಂಡಿಬಾಗ್ ರಕ್ಷಣೆ ಮಾಡಿದ್ರಾ ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಅವರು ಪ್ರಶ್ನೆ ಮಾಡಿದರು.
ಸೋಮವಾರ ಕರಾವಳಿ ಕೋಮುಗಲಾಟೆಗೆ ಸಂಬಂಧಿಸಿದಂತೆ ಎಚ್‍ಡಿಕೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಪ್ರಕಟಿಸಿ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕರಾವಳಿಯ ಕೋಮುದಳ್ಳುರಿಯಲ್ಲಿ ಬೇಳೆ ಬೇಯಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವ ರಾಷ್ಟ್ರೀಯ ಪಕ್ಷಗಳು.
ಕೋಮು ವೈಷಮ್ಯದ ದಳ್ಳುರಿಗೆ ಸಿಲುಕಿರುವ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಅಗತ್ಯ ಪ್ರಯತ್ನ ಮಾಡಬೇಕು. ಇದಕ್ಕೆ ಆಡಳಿತ ಮತ್ತು ವಿರೋಧ ಪಕ್ಷಗಳೆಂಬ ವ್ಯತ್ಯಾಸವಿಲ್ಲ ಆದರೆ ಕರಾವಳಿಯಲ್ಲಿ ಕೋಮು ದಳ್ಳುರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳೋವುದಕ್ಕೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಯತ್ನ ಮಾಡುತ್ತಿವೆ. ಬಿಜೆಪಿ ಕೋಮು ನಡೆದರೆ ತನಗೆ ಲಾಭವೆಂದು ಯೋಚಿಸುತ್ತುದೆ. ಸಾವಿನಲ್ಲೂ ಇವರ ವಿಭಜನೆಯ ರಾಜಕಾರಣವಿದೆ.
ಸದಾನಂದ ಗೌಡರವರು ಮುಖ್ಯಮಂತ್ರಿಗೆ, ಮೃತಪಟ್ಟ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ನ ತಂದೆಯ ಸ್ಥಾನದಲ್ಲಿ ಕಲ್ಪಿಸಿಕೊಂಡು ನ್ಯಾಯ ದೊರಕಿಸಿಕೊಡಲು ಕೋರಿದ್ದಾರೆ. ಶರತ್ ನ ತಂದೆಯ ಮುಖವನ್ನು ನೆನೆಸಿಕೊಂಡು ಸಂಕಟ ಪಟ್ಟಿದ್ದಾರೆ.ವಿಶ್ವ ಮಾನವನಾಗಿ ಹುಟ್ಟುವ ಮನುಷ್ಯ ಅಲ್ಪ ಮಾನವನಾಗಿ ಬೆಳೆದು, ಅಲ್ಪ ಮಾನವನಾಗಿ ಸಾಯಿಸಲು ಪ್ರಯತ್ನಿಸುತ್ತಿರುವ ಕರಾಳ ರಾಜಕೀಯ ವ್ಯವಸ್ಥೆ ಕರಾವಳಿಯಲ್ಲಿ ಕೋಮು ಗಲಭೆ ಸೃಷ್ಟಿಸುತ್ತಿದೆ.
ಕಳೆದ 3 ವರ್ಷಗಳಲ್ಲಿ ಕರಾವಳಿಯಲ್ಲಿ ಕೊಲೆಗೀಡಾದ ವಿನಾಯಕ ಬಾಳಿಗಾ, ಪ್ರವೀಣ್ ಪೂಜಾರಿ, ಪ್ರತಾಪ್ ಮುರಳಿ, ಭಾಸ್ಕರ್ ಕುಂಬ್ಳೆ, ಶ್ರೀನಿವಾಸ್ ಬಜಾಲ್, ಹರೀಶ್ ಬಂಡಾರಿ ಕುಳಾಯಿ, ಶಿವರಾಜ್ ಕೊಡಿಕೆರೆ, ಪ್ರಕಾಶ್ ಕುಳಾಯಿ, ಮಣಿಕಂಠ ಸೂರತ್ಕಲ್, ಹೇಮಂತ್ ಸೂರತ್ಕಲ್, ಕೇಶವ್ ಪೂಜಾರಿ ಸೂರಿಂಜೆ, ಹರೀಶ್ ಪೂಜಾರಿ ಬಂಟ್ವಾಳ, ನಾಸಿರ್ ಸಜೀಪ, ಮುಸ್ತಪಾ ಕಾವುರು, ಅಶ್ರಫ್ ಕಲಾಯಿ, ಜಲೀಲ್ ಕರೋಪಾಡಿ, ಶಾಹುಲ್ ಅಮೀತ್ ಮಡಿಕೇರಿ, ಸಪ್ಪಾನ್ ಪಿಲಾರ್, ಕಬೀರ್ ಕುದ್ರೋಳಿ,ಸುಲೆಮಾನ್ ಕಾರ್ಕಳ ಮತ್ತು ಕಬೀರ್ ಪೋಲಾಳಿ.. ಸತ್ತ ಇವರ್ಯಾರು ಯಾವುದೇ ರಾಜಕಾರಿಣಿ ಅಥವಾ ಕೋಮು ಸಂಘಟನೆಗಳ ಮುಖಂಡರ ಮಕ್ಕಳಲ್ಲ.ಕೊಲೆಗಡುಕರಿಗೆ ಯಾವುದೇ ಧರ್ಮವಿಲ್ಲ. ವಯಕ್ತಿಕ ಹಿತಾಸಕ್ತಿ ಅಷ್ಟೇ ಇಲ್ಲಿ ಪ್ರಾಧಾನ್ಯ.ಇವರೆಲ್ಲ ಅಮಾಯಕ ಬಡವರು.
ಕೊಲೆಗಡುಕರನ್ನು ತಮ್ಮವರು ಎಂಬ ಕಾರಣಕ್ಕೆ ಬೆಂಬಲಿಸುವ ಈ ಎರಡು ಪಕ್ಷಗಳ ರಾಜಕಾರಣದಿಂದ ನೆತ್ತರು ಹರಿಯುತ್ತಿದೆ. ಸತ್ತವರ ಹೆಸರು ಮತ್ತು ಧರ್ಮವನ್ನು ನೋಡಿ, ಪ್ರತಿಕ್ರಿಯಿಸುವುದಕ್ಕಿಂತ ದೊಡ್ಡದಾದ ಕ್ರೌರ್ಯ ಬೇರೆ ಇಲ್ಲ .ಕೊಂದವನು ತನ್ನ ಧರ್ಮ ಅಥವಾ ತನ್ನ ಪಕ್ಷವೆಂಬ ಕಾರಣಕ್ಕೆ ಬೆಂಬಲಿಸಿದರೆ, ಅದರಂತಹ ಆತ್ಮ ವಂಚನೆ ಮತ್ತೊಂದಿಲ್ಲ.ಕೋಮು ಗಲಭೆ ಎಬ್ಬಿಸಿ, ಸತ್ತವರ ರಕ್ತದ ಮೇಲೆ ರಾಜಕಾರಣ ಮಾಡಹೊರಟಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳೆರಡಕ್ಕೂ ಜನತೆ ಕೋಮು ಸೌಹಾರ್ದತೆಯಿಂದ ಬದುಕುವ ಮೂಲಕ ಪ್ರತ್ತ್ಯುತ್ತರ ನೀಡಬೇಕು. ನಿಷ್ಕ್ರಿಯ ಗೊಂಡಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲು ಸರ್ಕಾರ ಪ್ರಯತ್ನಿಸಲಿ.