ಮಂಡ್ಯ: ಮಲ್ಲೇಷಿಯಾದಲ್ಲಿ ನಡೆದ ಏಷ್ಯಾ ಪ್ಯಾನಿಕ್ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ (International Yoga Competition) ಮಂಡ್ಯದ ಜೆ.ಕೆ ಅರ್ಪಿತ 3ನೇ ಸ್ಥಾನ ಪಡೆದಿದ್ದಾರೆ.
ಮಂಡ್ಯ (Mandya) ತಾಲ್ಲೂಕಿನ ಜವನಹಳ್ಳಿ ಗ್ರಾಮದ ಕುಮಾರ್ ಎಂಬುವರ ಪುತ್ರಿ ಅರ್ಪಿತಾ ಅಕ್ಟೋಬರ್ 14ರಂದು ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಮಂಡ್ಯಕ್ಕೆ ಕೀರ್ತಿ ತಂದಿದ್ದಾರೆ.
ಪ್ರಸ್ತುತ ಹಾಸನ ಜಿಲ್ಲೆಯ ಶ್ರವಣಬೆಳಗೋಳದಲ್ಲಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಅರ್ಪಿತಾ, ಕಳೆದ ಜೂನ್‌ನಲ್ಲಿ ಶಿವಮೊಗ್ಗದ ಸಾಗರದಲ್ಲಿ ನಡೆದ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಹಾಗೂ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಡಬ್ಲ್ಯೂಎಫ್ ಯೋಗಾಸನ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದರು. ಬಳಿಕ ಕೇರಳದ ಎರ್ನಾಕಲಂನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಭಾಗಿಯಾಗಿ ಉತ್ತಮ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಈವರೆಗೆ ಎರಡು ರಾಜ್ಯಮಟ್ಟದ ಹಾಗೂ ಎರಡು ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾಗುವ ಜೊತೆಗೆ ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ 3ನೇ ಬಹುಮಾನ ಪಡೆಯುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.