– ಪ್ರಿಯಕರ, ಸುಪಾರಿ ಕಿಲ್ಲರ್ಸ್ ಜೊತೆ ಸೇರಿ ಕೊಲೆ
– ಪರಾರಿಯಾಗುತ್ತಿದ್ದಾಗ ಸೆರೆ ಸಿಕ್ಕ ಹಂತಕರು
– ಕೊಲೆ ಮಾಡಿ ನಾಟಕ ಮಾಡಿದ್ದ ಪತ್ನಿ
ಮಂಡ್ಯ: ಮಂಗಳೂರಿನಲ್ಲಿ ಇಟ್ಟಿದ್ದ ಬಾಂಬ್‍ನಿಂದ ಇಡೀ ರಾಜ್ಯವೇ ಆತಂಕಕ್ಕೆ ಒಳಗಾಗಿತ್ತು. ಈ ಆತಂಕದ ನಡುವೇ ಮಂಗಳೂರಿನ ಬಾಂಬ್ ಪ್ರಕರಣದಿಂದಾಗಿ ಕೊಲೆ ಮಾಡಿ ತಲೆ ಮರೆಸಿಕೊಳ್ಳುತ್ತಿದ್ದ ಕೊಲೆಗಾರರು ಸಿಕ್ಕಿಹಾಕಿಕೊಂಡಿದ್ದಾರೆ.
ಮಂಡ್ಯದ ವಿದ್ಯಾನಗರದ 2 ನೇ ಕ್ರಾಸ್‍ನ ಮನೆಯೊಂದರಲ್ಲಿ ರಾಜಸ್ಥಾನ ಮೂಲದ ಬುಂಡಾರಾಮ್ ಎಂಬಾತನನ್ನು ಸೋಮವಾರ ರಾತ್ರಿ ಬರ್ಬರವಾಗಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ನನ್ನ ಹಾಗು ನನ್ನ ಮಕ್ಕಳ ಕೈ ಕಾಲನ್ನು ಕಟ್ಟಿಹಾಕಿ ನಾಲ್ವರು ದರೋಡೆಕೊರರು ನನ್ನ ಗಂಡನನ್ನು ಕೊಲೆ ಮಾಡಿ ನನ್ನ ಮೈ ಮೇಲೆ ಇದ್ದ ಚಿನ್ನಾಭರಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಕೊಲೆಯಾದ ಬುಂಡಾರಾಮ್ ಪತ್ನಿ ಚಂದ್ರಿಕಾ ಪೊಲೀಸರಿಗೆ ಹೇಳಿಕೆ ನೀಡಿದ್ದಳು. ಅಂದೇ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದರು.
Advertisement
Advertisement
ಸಿಕ್ಕಿಬಿದ್ದಿದ್ದು ಹೇಗೆ?
ಮಂಗಳೂರಿನಲ್ಲಿ ಬಾಂಬ್ ಇಟ್ಟಿದ್ದ ಹಿನ್ನೆಲೆಯಲ್ಲಿ ಇಡೀ ರಾಜ್ಯದ ಪೊಲೀಸರು ಆಯಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಬಸ್ ನಿಲ್ದಾಣ ಸೇರಿದಂತೆ ಹೆಚ್ಚು ಜನರು ಸೇರುವ ಪ್ರದೇಶದಲ್ಲಿ ಹದ್ದಿನ ಕಣ್ಣು ಇಟ್ಟಿದ್ದರು. ಸೋಮವಾರ ರಾತ್ರಿ ಮಂಡ್ಯದಲ್ಲಿ ಕೊಲೆ ಮಾಡಿ ಚನ್ನರಾಯಪಟ್ಟಣದವರೆಗೆ ಕೊಲೆಗಾರರು ಬಸ್‍ನಲ್ಲಿ ಪ್ರಯಾಣ ನಡೆಸಿದ್ದಾರೆ. ಈ ವೇಳೆ ಕೊಲೆ ಮಾಡಿರುವ ಹಂತಕರು ತಮ್ಮಲ್ಲಿ ಇದ್ದ ಬ್ಯಾಗ್‍ನ್ನು ಚನ್ನರಾಯಪಟ್ಟಣ ಬಸ್ ನಿಲ್ದಾಣದಲ್ಲಿ ಮರೆತು ಹೋಗಿದ್ದರು.
Advertisement
ಅಪರಿಚಿತ ಬ್ಯಾಗ್ ನೋಡಿದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಬಾಂಬ್ ಎಂದು ಭಯಭೀತರಾಗಿ ಪೊಲೀಸ್‍ಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಬಂದ ಪೊಲೀಸರು ಬ್ಯಾಗ್‍ನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಬ್ಯಾಗ್‍ನಲ್ಲಿ ಬುಂಡಾರಾಮ್ ಕೊಲೆಗೆ ಬಳಸಿದ್ದ ಡ್ರಾಗನ್, ಚಾಕು ಹಾಗೂ ಗನ್ ಪತ್ತೆಯಾಗಿದೆ. ನಂತರ ಪೊಲೀಸರು ಬ್ಯಾಗ್ ಅಲ್ಲೇ ಇಟ್ಟು, ಬ್ಯಾಗ್‍ನ್ನು ವೀಕ್ಷಣೆ ಮಾಡಿದ್ದಾರೆ. ಕೊಲೆ ಮಾಡಿದ್ದ ಆರೋಪಿಗಳು ಬ್ಯಾಗ್‍ನ್ನು ಜ್ಞಾಪಕ ಮಾಡಿಕೊಂಡು ತೆಗೆದುಕೊಳ್ಳಲು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ನಾವು ಮಂಡ್ಯದಲ್ಲಿ ಬುಂಡಾರಾಮ್ ಎಂಬುವವರನ್ನು ಕೊಲೆ ಮಾಡಿ ಬಂದಿದ್ದೇವೆ ಎಂದು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
Advertisement
ಸುಪಾರಿ ನೀಡಿದ್ಳು ಪತ್ನಿ:
ಚನ್ನರಾಯಪಟ್ಟಣ ಪೊಲೀಸರು ಬಂಧಿಸಿದ ಇಬ್ಬರು ಕೊಲೆಗಾರರು ಮನೀಶ್ ಮತ್ತು ಕಿಶನ್ ಇವರು ಸುಪಾರಿ ಕಿಲ್ಲರ್ಸ್ ಆಗಿದ್ದಾರೆ. ಇವರು ಮಂಡ್ಯದ ಕೊಲೆಗೆ ಸಂಬಂಧಪಟ್ಟ ಆರೋಪಿಗಳು ಆದ ಕಾರಣ ಚನ್ನರಾಯಪಟ್ಟಣ ಪೊಲೀಸರು ಮನೀಶ್ ಮತ್ತು ಕಿಶನ್ ಇಬ್ಬರನ್ನು ಮಂಡ್ಯ ಪೊಲೀಸರ ವಶಕ್ಕೆ ನೀಡಿದ್ದಾರೆ. ಮಂಡ್ಯ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದಾಗ ಈ ಕೊಲೆ ಮಾಡಿಸಿದ್ದು, ಬುಂಡಾರಾಮ್ ಪತ್ನಿ ಚಂದ್ರಿಕಾ ಮತ್ತು ಆಕೆಯ ಪ್ರಿಯಕರ ಸುರೇಶ್ ಹಾಗೂ ಅವರಿಬ್ಬರೂ ಕೊಲೆ ಮಾಡುವಾಗ ಸಹಕರಿಸಿದ್ದಾರೆ ಎಂದು ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ನಂತರ ಚಂದ್ರಿಕಾ ಮತ್ತು ಸುರೇಶ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ ವೇಳೆ ನಾವೇ ಕೊಲೆ ಮಾಡಿಸಿದ್ದು ಎಂದು ಇಬ್ಬರು ಒಪ್ಪಿಕೊಂಡಿದ್ದಾರೆ.
ಬಾಲ್ಯದ ಪ್ರೀತಿ
ಚಂದ್ರಿಕಾ ಮತ್ತು ಸುರೇಶ್ ಇಬ್ಬರು ಸಹ ಬಾಲ್ಯದಿಂದ ಪ್ರೀತಿಸುತ್ತಿದ್ದರು. ಇವರು ಸಹ ರಾಜಸ್ಥಾನ ಮೂಲದವರಾಗಿದ್ದು, ಕುಣಿಗಲ್‍ನಲ್ಲಿ ಈ ಹಿಂದೆ ವಾಸವಿದ್ದರು. ಸುರೇಶ್ ಒಂದು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಚಂದ್ರಿಕಾ ಆಕೆಯ ತಂದೆ ತಾಯಿಗಳೊಂದಿಗೆ ಇದ್ದಳು. ಈ ವೇಳೆ ಇವರಿಬ್ಬರಿಗೂ ಪ್ರೀತಿ ಬೆಳೆಯುತ್ತದೆ. ಇವರಿಬ್ಬರ ಪ್ರೀತಿಯನ್ನು ಮನೆಯವರು ನಿರಾಕರಿಸಿದ ಕಾರಣ ಚಂದ್ರಿಕಾ ಸುರೇಶ್ ಮನೆ ಬಿಟ್ಟು ಹೋಗುತ್ತಾರೆ. ಬಳಿಕ ಚಂದ್ರಿಕಾ ಮನೆಯವರು ಚಂದ್ರಿಕಾಳನ್ನು ಹುಡುಕಿಕೊಂಡು ಬಂದು ಬುಂಡಾರಾಮ್‍ನೊಂದಿಗೆ ಮದುವೆ ಮಾಡುತ್ತಾರೆ. ಬುಂಡಾರಾಮ್ ಮಂಡ್ಯದಲ್ಲಿ ಹಾರ್ಡ್‍ವೇರ್ ಅಂಗಡಿ ಇಟ್ಟುಕೊಂಡು ಆರ್ಥಿಕವಾಗಿ ಚನ್ನಾಗಿ ಇರುತ್ತಾನೆ. ಮದುವೆಯಾದ ನಂತರ ಬುಂಡಾರಾಮ್ ಹಾಗೂ ಚಂದ್ರಿಕಾಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಕೂಡ ಇದೆ. ಸಂಸಾರ ಎಲ್ಲವೂ ಸಹ ಚೆನ್ನಾಗಿ ನಡೆಯುತ್ತಿದ್ದಾಗ ಮತ್ತೆ ಸುರೇಶ್ ಚಂದ್ರಿಕಾಳ ಸಂಪರ್ಕಕ್ಕೆ ಬರುತ್ತಾನೆ. ಈ ನಡುವೆ ಸುರೇಶ್ ಒಬ್ಬಳನ್ನು ಮದುವೆಯಾಗಿದ್ದು, ಆಕೆ ಸಾವನ್ನಪ್ಪಿರುತ್ತಾಳೆ. ಬಳಿಕ ಸುರೇಶ್ ಮತ್ತು ಚಂದ್ರಿಕಾ ನಾವಿಬ್ಬರು ಮತ್ತೆ ಒಂದಾಗೋಣಾ ಎಂದು ನಿರ್ಧಾರ ಮಾಡುತ್ತಾರೆ. ಹೀಗಾಗಿ ಬುಂಡಾರಾಮ್ ಕೊಲೆ ಮಾಡಬೇಕು ಎಂದು ಇಬ್ಬರು ಸಂಚು ರೂಪಿಸುತ್ತಾರೆ.
ರಾಜಸ್ಥಾನ ಮೂಲದ ಮನೀಶ್ ಮತ್ತು ಕಿಶನ್ ಇಬ್ಬರನ್ನು ಸುರೇಶ್ ಸಂಪರ್ಕ ಮಾಡಿ ಕರೆಸುತ್ತಾನೆ. ಇವರಿಗೆ ಸುರೇಶ್ 12 ಸಾವಿರ, ಚಂದ್ರಿಕಾ 50 ಸಾವಿರ ನೀಡುತ್ತಾರೆ. ನಂತರ ಕಳೆದ ಸೋಮವಾರ ರಾತ್ರಿ 11.30 ಗಂಟೆಗೆ ಪ್ರಿಯಕರ ಸುರೇಶ್ ಹಾಗೂ ಸುಪಾರಿ ಕಿಲ್ಲರ್ಸ್ ಮನೀಶ್ ಮತ್ತು ಕಿಶನ್ ಬುಂಡಾರಾಮ್ ಮನೆ ಬಾಗಿಲು ತಟ್ಟುತ್ತಾರೆ. ಈ ವೇಳೆ ಚಂದ್ರಿಕಾ ನಿಧಾನವಾಗಿ ಮನೆ ಬಾಗಿಲನ್ನು ತೆಗೆಯುತ್ತಾಳೆ. ಈ ವೇಳೆ ಇಬ್ಬರು ಮಕ್ಕಳು ಒಂದು ರೂಂನಲ್ಲಿ ಮಲಗಿರುತ್ತಾರೆ. ಆ ರೂಂನ ಬಾಗಿಲನ್ನು ಸಹ ಚಂದ್ರಿಕಾ ಹಾಕಿರುತ್ತಾಳೆ. ನಂತರ ಇನ್ನೊಂದು ರೂಂನಲ್ಲಿ ಬುಂಡಾರಾಮ್ ಮಲಗಿರುತ್ತಾನೆ. ಆ ರೂಂಗೆ ಹೋದ ನಾಲ್ವರು ಬುಂಡಾರಾಮ್‍ನ ಬಾಯಿ ಮುಚ್ಚಿ ಕುತ್ತಿಗೆ ಭಾಗವನ್ನು ಚಾಕುವಿನಿಂದ ಕುಯ್ದು, ಎದೆ ಭಾಗಕ್ಕೆ ಡ್ರಾಗನ್‍ನಲ್ಲಿ ಚುಚ್ಚುತ್ತಾರೆ. ನಂತರ ಚಂದ್ರಿಕಾಳೆ ತನ್ನ ಮೈ ಮೇಲೆ ಇದ್ದ ಮಾಂಗಲ್ಯ ಸರ ಹಾಗೂ ಇನ್ನೊಂದು ಚಿನ್ನದ ಸರವನ್ನು ಕೊಟ್ಟು ಕಳುಹಿಸುತ್ತಾಳೆ.
ಪತ್ನಿಯಿಂದ ನಾಟಕ:
ಆ ಮೂವರು ಮನೆಯಿಂದ ಜಾಗ ಖಾಲಿ ಮಾಡಿದ ಬಳಿಕ ಚಂದ್ರಿಕಾ ತನ್ನ ಮಕ್ಕಳನ್ನು ಕರೆದುಕೊಂಡು ಹೊರಗೆ ಬಂದು ನನ್ನ ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಕಿರುಚುತ್ತಾಳೆ. ನಂತರ ಅಕ್ಕ-ಪಕ್ಕದ ಮನೆಯವರು ಬಂದು ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಚಂದ್ರಿಕಾ ನಾಲ್ವರು ಮುಸುಕುಧಾರಿಗಳು ಬಂದು ನನ್ನ ಮತ್ತು ಮಕ್ಕಳ ಕೈಕಾಲು ಕಟ್ಟಿಹಾಕಿ ನನ್ನ ಗಂಡನನ್ನು ಕೊಂದರು. ಅವರು ದರೋಡೆಕೋರರು ನನ್ನ ಮೈ ಮೇಲಿದ್ದ ಚಿನ್ನಾಭರಣವನ್ನು ತೆಗೆದುಕೊಂಡು ಹೋದರು ಎಂದು ಕಥೆ ಕಟ್ಟುತ್ತಾಳೆ. ನಂತರ ಚಂದ್ರಿಕಾಳ ಹೇಳಿಕೆಯ ಮೇಲೆ ಪೊಲೀಸರು ಸಹ ದೂರು ದಾಖಲಿಸುತ್ತಾರೆ. ಈ ವೇಳೆ ಚಂದ್ರಿಕಾಳ ನಡವಳಿಕೆ ವಿಭಿನ್ನವಾಗಿರುತ್ತೆ. ಹೀಗಾಗಿ ಪೊಲೀಸರು ಈಕೆಯ ಮೇಲೂ ಅನುಮಾನ ವ್ಯಕ್ತಪಡಿಸಿ ಒಂದು ಕಣ್ಣು ಇಟ್ಟಿರುತ್ತಾರೆ. ಅಂತಿಮವಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು ನಿಜವಾಗಿದ್ದು, ಚಂದ್ರಿಕಾಳೇ ಈ ಕೊಲೆಯ ಮೂಲ ರೂವಾರಿ ಎಂದು ತಿಳಿದು ಬಂದಿದೆ.