Connect with us

Districts

ಪವಾಡದಂತೆ ನಡೆದ ಗುಡ್ಡಪ್ಪನ ಆಯ್ಕೆ- ನೇಮಕ ವಿರೋಧಿಸಿದವರನ್ನು ಅಟ್ಟಾಡಿಸಿದ ಬಸವ

Published

on

ಮಂಡ್ಯ: ಮದ್ದೂರು ತಾಲೂಕಿನ ಚಿಕ್ಕಅರಸಿನಕೆರೆ ಬಸವ ತಂಪಿನ ಮಾರಮ್ಮನಿಗೆ ಗುಡ್ಡಪ್ಪ (ಪೂಜಾರಿ)ಯನ್ನು ಪವಾಡ ರೀತಿಯಲ್ಲಿ ನೇಮಕ ಮಾಡಿತು.

ಗ್ರಾಮದ ಹೊಸಹಳ್ಳಿಯಲ್ಲಿ ಚನ್ನಪ್ಪ ಎಂಬವರ ಮನೆ ಪಕ್ಕದಲ್ಲಿ ತಂಪಿನ ಮಾರಮ್ಮನ ಪುಟ್ಟ ಗುಡಿಯಿತ್ತು. ಇತ್ತೀಚೆಗೆ ಮಾರಮ್ಮ ಚನ್ನಪ್ಪರ ಪುತ್ರ ಮನ ಕನಸಿನಲ್ಲಿ ಬಂದು ನಾನು ಇಲ್ಲೇ ನೆಲೆಸಿದ್ದೇನೆ. ನನಗೆ ಚೆನ್ನಾಗಿರುವ ಗುಡಿ ಕಟ್ಟಿಸು, ನಿನಗೆ ಒಳ್ಳೆಯದು ಮಾಡುತ್ತೇನೆ ಎಂದು ಹೇಳಿದ್ದಳಂತೆ. ಆ ಹಿನ್ನೆಲೆಯಲ್ಲಿ 2 ಲಕ್ಷ ರೂ. ಹಾಕಿ ದಾನಿಗಳಿಂದ 13 ಲಕ್ಷ ರೂ. ಸಂಗ್ರಹಿಸಿ ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಿದ್ದು, ಸೋಮವಾರ, ಮಂಗಳವಾರ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಮಾರಮ್ಮನಿಗೆ ಮಂಗಳವಾರ ಗುಡ್ಡಪ್ಪನ ಆಯ್ಕೆಗೆ ಚಿಕ್ಕಅರಸಿನಕೆರೆ ಬಸವನನ್ನು ಕರೆಸಲಾಗಿತ್ತು. ಬೆಳಗ್ಗೆ 11 ಗಂಟೆಗೆ ದೇವಾಲಯದಿಂದ ಹನಿಯಂಬಾಡಿ ರಸ್ತೆಯಲ್ಲಿನ ಹೆಬ್ಬಾಳದ ಬಳಿ ಗ್ರಾಮದ 5 ದೇವರುಗಳ ಮೆರವಣಿಗೆ ತೆರಳಿ, ಬಸವನಿಗೆ ಪೂಜೆ ಪುನಸ್ಕಾರ ಮಾಡಿ ನಿಂತರು. ನೂರಾರು ಜನರ ನಡುವೆ ನಿಂತಿದ್ದ ಮನು ಅವರನ್ನು ಬಸವ ನೇಮಕ ಮಾಡಿತು. ಆದರೆ ಆತ ಬಸವನ ಕಾಲು ಹಿಡಿದುಕೊಂಡು ನನ್ನಿಂದ ಆಗುವುದಿಲ್ಲ. ಬೇರೆಯವರನ್ನು ನೇಮಕ ಮಾಡು ಎಂದು ಕೋರಿದರು.

ಸ್ಥಳದಲ್ಲಿದ್ದ ಜನತೆ ಬಲವಂತ ಮಾಡಿದರು ಮನು ನಿರಾಕರಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಕದಲದೆ ನಿಂತ ಬಸವ, ಗ್ರಾಮದ ಜನತೆ ಪೂಜೆಗಳನ್ನು ತಲೆ ಮೇಲೆ ಹೊತ್ತು ಹೊರಟು ದೇವಾಲಯದತ್ತ ಹೆಜ್ಜೆ ಹಾಕಿತು. ಅರ್ಧ ಕಿ.ಮೀ. ಸಾಗಿ ರಸ್ತೆಲ್ಲಿಯೇ ನಿಂತಿತು. ಇತ್ತ ಮನು ಮನವೊಲಿಕೆಗೆ ಜನತೆ ಕಸರತ್ತು ನಡೆಸಿದ್ದರು ಪ್ರಯೋಜನವಾಗಿರಲಿಲ್ಲ. ಪರಿಣಾಮ ಪೂಜೆ ಮಾಡುವವರು ಯಾರೆಂಬ ಚಿಂತೆ ಗ್ರಾಮಸ್ಥರನ್ನು ಕಾಡಲಾರಂಭಿಸಿ, ಬಸವ ನಿಂತಿದ್ದ ಸ್ಥಳದಲ್ಲೇ ನಮಗೆ ಪರಿಹಾರ ಕಲ್ಪಿಸದೆ ಹೋಗಬೇಡ ಎಂದು ಮತ್ತೇ ಪೂಜೆ ಸಲ್ಲಿಸಿ ಕೋರಿಕೊಂಡರು.

ಕೆಲಹೊತ್ತು ಸುಮ್ಮನಿದ್ದ ಬಸವ ಹೊನ್ನೇಗೌಡ ಎಂಬವರ ಪುತ್ರ ಜಗದೀಶ್ ಅವರತ್ತ ತೆರಳಿತು. ಆತ ಹೆದರಿ ಅಲ್ಲಿಂದ ಹೋಗಲು ಪ್ರಯತ್ನಿಸಿದಾಗ ಬಿಡದ ಬಸವ ಮತ್ತೇ ಹೆಬ್ಬಾಳದ ತನಕ ಆತನನ್ನು ಅಟ್ಟಿಸಿಕೊಂಡು ಬಂದು ನೀರಿನೊಳಗೆ ನೂಕಿತು. ಆತ ಕೈಮುಗಿದು ಬೇಡಿಕೊಂಡರು ಬಿಡಲಿಲ್ಲ.

ಬೇಡ ಎಂದವರನ್ನು ಅಟ್ಟಾಡಿಸಿದ ಬಸವ:
ಜಗದೀಶ್ ನೇಮಕ ಮಾಡಿದ್ದಕ್ಕೆ ಆತನ ದೊಡ್ಡಪ್ಪನ ಪುತ್ರ ರಾಜಕುಮಾರ್ ವಿರೋಧ ವ್ಯಕ್ತಪಡಿಸಿ ಜೋರಾಗಿ ಮಾತನಾಡುತ್ತಿದ್ದರು. ಇದರಿಂದ ಕೆರಳಿದ ಬಸವ ಅವರನ್ನು ಅಟ್ಟಾಡಿಸಿ ಬಟ್ಟೆ ಹರಿದು ಮತ್ತೆ ಜಗದೀಶ್ ನಿಂತಿದ್ದ ಹೆಬ್ಬಾಳಕ್ಕೆ ಇಳಿಯಿತು. ರಾಜಕುಮಾರ್ ಮಾತು ಮುಂದುವರಿಸಿದ್ದ ಮತ್ತೆ ಅವರನ್ನು ಅಟ್ಟಾಡಿಸಿ ಅಲ್ಲಿಂದ ದೂರ ಕಳಿಸಿತು. ನಂತರ ಜಗದೀಶ್ ಸ್ನಾನ ಮಾಡುವವರೆಗೂ ಬಿಡಲಿಲ್ಲ. ಆತ ಸ್ನಾನ ಮಾಡಿ ಪೂಜೆ ಸಲ್ಲಿಸಿದ ಬಳಿಕ ಅಲ್ಲಿಂದ ದೇವಾಲಯದತ್ತ ಆಗಮಿಸಿತು. ಜಗದೀಶ್ ತಾತಂದಿರು ಪೂಜಾ ಕಾರ್ಯ ನೆರವೇರಿಸುತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅನ್ನ ಸಂತರ್ಪಣೆ:
ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆ 5.15ರಿಂದಲೇ ಗುರು ಗಣಪತಿ ಪೂಜೆ, ಪುಣ್ಯಾಹ, ಪ್ರಾಣಪ್ರತಿಷ್ಠಾಪನೆ, ಕಲಾತತ್ವಹೋಮ, ಶಾಂತಿಪ್ರಾಯಶ್ಚಿತ್ತ ಹೋಮ, ಕುಂಭಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಪೂರ್ಣಾಹುತಿ, ಮಹಾಪೂಜೆ, ಮಹಾ ಮಂಗಳಾರತಿ, ಆಶೀರ್ವಚನ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ನಡೆಯಿತು. ಗ್ರಾಮದ ಎಲ್ಲ ಜನತೆ ಸೇರಿ ಅಕ್ಕಪಕ್ಕದ ಗ್ರಾಮದ ಜನತೆ, ಹೊರಗಿನಿಂದ ಆಗಮಿಸಿದ್ದ ಭಕ್ತರು ಪ್ರಸಾದ ಸ್ವೀಕರಿಸಿದರು.

Click to comment

Leave a Reply

Your email address will not be published. Required fields are marked *