ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಸರ್ಕಾರಿ ನೌಕರಿ ಬಿಟ್ಟು ಸನ್ಯಾಸತ್ವ ದೀಕ್ಷೆ ಪಡೆಯಲು ಕೆಎಎಸ್ ಅಧಿಕಾರಿಯೊಬ್ಬರು (KAS Officer) ಮುಂದಾಗಿದ್ದಾರೆ.
ಮಂಡ್ಯ ಜಿಲ್ಲೆಯ ಎಡಿಸಿಯಾಗಿ (Mandya ADC) ಕಾರ್ಯನಿರ್ವಹಿಸುತ್ತಿರುವ ಎಚ್.ಎಲ್.ನಾಗರಾಜು ಅವರು ಇದೀಗ ನಾಗರೀಕ ಸೇವೆ ತೊರೆದು ಸನ್ಯಾಸತ್ವ ಸ್ವೀಕಾರಕ್ಕೆ ನಿರ್ಧಾರ ಮಾಡಿದ್ದಾರೆ. ಸ್ವಯಂ ನಿವೃತ್ತಿ ಪಡೆದು ದೀಕ್ಷೆ ಸ್ವೀಕರಿಸಲಿರುವ ಮಂಡ್ಯ ಅಪರ ಜಿಲ್ಲಾಧಿಕಾರಿ ನಾಗರಾಜು ಅವರ ನಿರ್ಧಾರ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಬಡವರ ಖಾತೆಗೆ 5 ಸಾವಿರ – ವದಂತಿ ನಂಬಿ ಪೋಸ್ಟ್ ಆಫೀಸ್ ಮುಂದೆ ಕ್ಯೂ ನಿಂತ ಜನ
ಕೆಲವೇ ದಿನಗಳಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಲಿರುವ ನಾಗರಾಜು ಅವರು ಬಳಿಕ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದಲ್ಲಿ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿ ಶ್ರೀ ಚಂದ್ರಶೇಖರ ಸ್ವಾಮೀಜಿ ಶಿಷ್ಯರಾಗಿ ಮುಂದುವರೆಯಲಿದ್ದಾರೆ ಎಂದು ನಾಗರಾಜು ಅವರ ಆಪ್ತ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: Bangladesh | ಭಾರತಕ್ಕೆ ತೆರಳದಂತೆ 50ಕ್ಕೂ ಹೆಚ್ಚು ಇಸ್ಕಾನ್ ಸದಸ್ಯರಿಗೆ ಗಡಿಯಲ್ಲಿ ತಡೆ
ಈ ಹಿಂದೆಯೂ ಸಹ ನಾಗರಾಜು ಅವರು ಸನ್ಯಾಸತ್ವ ಸ್ವೀಕರಿಸಿದ್ದರು. 2011ರಲ್ಲಿ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಹಶಿಲ್ದಾರ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜು ಅವರು ತಹಶಿಲ್ದಾರ್ ಹುದ್ದೆ ತೊರೆದು ಆದಿಚುಂಚನಗಿರಿ ಮಠದಲ್ಲಿ ಶ್ರೀಬಾಲಗಂಗಾಧರನಾಥ ಶ್ರೀಗಳಿಂದ ಸ್ವಾಮೀಜಿಯಾಗಿ ದೀಕ್ಷೆ ಪಡೆದಿದ್ದರು.
ಆಗ ನಿರ್ಮಲಾನಂದನಾಥ ಸ್ವಾಮೀಜಿ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಆ ವೇಳೆ ನಾಗರಾಜು ಅವರು ಮತ್ತೆ ತಹಶಿಲ್ದಾರ್ ಹುದ್ದೆಗೆ ಬರಲೇಬೇಕೆಂದು ಸಾರ್ವಜನಿಕರು ಪ್ರತಿಭಟನೆ ಮಾಡಿದ್ದರು. ಬಳಿಕ ಹಿತೈಷಿಗಳು ಹಾಗೂ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಸನ್ಯಾಸತ್ವ ತ್ಯಜಿಸಿ ಪುನಃ ತಹಶಿಲ್ದಾರ್ ಹುದ್ದೆಗೆ ನಾಗರಾಜು ಅವರು ಮರಳಿದ್ದರು. ಇದನ್ನೂ ಓದಿ: ಗೋಧ್ರಾ ದುರಂತ ಆಧರಿತ ಸಿನಿಮಾ ‘ದಿ ಸಾಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ ಮೋದಿ
ಇದೀಗ ಮಂಡ್ಯ ಎಡಿಸಿಯಾಗಿರುವ ನಾಗರಾಜು ಅವರು ತಮ್ಮ ಹುದ್ದೆ ತೊರೆದು ಮತ್ತೆ ಕಾವಿ ಧರಿಸಲು ತೀರ್ಮಾನಿಸಿದ್ದಾರೆ.