ಮಂಡ್ಯ: ವಿಚಾರಣಾಧೀನ ಕೈದಿಯ ಸಾವಿಗೆ ಕಾರಾಗೃಹ ಅಧೀಕ್ಷಕರ ನಿಲಕ್ಷ್ಯವೇ ಕಾರಣ ಅಂತಾ ಆರೋಪಿಸಿ ಇದೀಗ ಜೈಲಿನೊಳಗೆ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿ ಆನಂದ್ ಎಂಬಾತನೇ ಮೃತ ದುರ್ದೈವಿ. ವರ್ಷದ ಹಿಂದೆ ಪೋಕ್ಸೋ ಕಾಯ್ದೆಯಡಿ ಬಂಧಿಯಾಗಿದ್ದ ಆನಂದ್‍ಗೆ ಮಂಗಳವಾರ ಅನಾರೋಗ್ಯ ಕಾಣಿಸಿಕೊಂಡಿತ್ತು. ಆತನನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆನಂದ್ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಅಸುನೀಗಿದ್ದಾನೆ.
ಆನಂದ್ ಸಾವಿಗೆ ಕಾರಾಗೃಹದ ಅಧೀಕ್ಷಕ ಲೋಕೇಶ್ ಅವ್ರೇ ಕಾರಣ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊಡಿಸಿದ್ರೆ ಬದುಕುಳಿಯುತ್ತಿದ್ದ ಅಂತಾ ಆರೋಪಿಸಿ ಜೈಲೊಳಗಿರೋ ಕೈದಿಗಳು ಆಕ್ರೋಶಗೊಂಡು ಪ್ರತಿಭಟಿಸಿದ್ರು. ಆನಂದ್ ಜೊತೆ ಬಂಧಿಯಾಗಿದ್ದ ಇನ್ನೊಬ್ಬ ಕೈದಿಯ ತಾಯಿ, ತನ್ನ ಮಗನೂ ಕಷ್ಟಕ್ಕೆ ಸಿಲುಕಿದ್ದಾನೆ. ಆತನನ್ನ ನೋಡಬೇಕು. ಬಾಗಿಲು ತೆಗೆಯಿರಿ ಅಂತಾ ಗೋಳಾಡ್ತ, ಕಾರಾಗೃಹ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ರು.
ಘಟನೆಯ ಬಗ್ಗೆ ತಿಳಿದ ಮಂಡ್ಯ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಜೈಲಿಗೆ ಭೇಟಿ ನೀಡಿ, ಪ್ರತಿಭಟನಾ ನಿರತ ಕೈದಿಗಳ ಜೊತೆ ಮಾತುಕತೆ ನಡೆಸಿದ್ದಾರೆ.