ಹೇಮಾವತಿ ನಾಲೆ ಅಭಿವೃದ್ಧಿ ಹೆಸರಲ್ಲಿ ನೂರಾರು ಕೋಟಿ ಅಕ್ರಮ ಆರೋಪ

Public TV
2 Min Read
Hemavathi Canal

ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಜೀವನಾಡಿ ಅಂದಾಕ್ಷಣ ಥಟ್ಟನೆ ನೆನಪಾಗೋದು ಕೆಆರ್‌ಎಸ್‌ ಡ್ಯಾಂ. ಆದ್ರೆ ಜಿಲ್ಲೆಯ ಏಳು ತಾಲ್ಲೂಕುಗಳ ಪೈಕಿ ಐದು ತಾಲ್ಲೂಕುಗಳು ಮಾತ್ರ ಕೆಆರ್‌ಎಸ್‌ (KRS Dam) ಅಚ್ಚುಕಟ್ಟು ವ್ಯಾಪ್ತಿಗೆ ಬಂದ್ರೆ ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿಗೆ ಹಾಸನ ಹೇಮಾವತಿ ಜಲಾಶಯವೇ ಆಸರೆ. ಹೀಗಿರುವಾಗ ಈ ಎರಡು ತಾಲ್ಲೂಕುಗಳಿಗೆ ನೀರು ಪೂರೈಸುವ ಹೇಮಾವತಿ ಎಡದಂಡೆ ನಾಲೆ (Hemavathi Canal) ಆಧುನೀಕರಣದ ಹೆಸರಲ್ಲಿ ನೂರಾರು ಕೋಟಿ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

Hemavathi

ಹೇಮಾವತಿ ಎಡದಂತೆ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕಳಪೆ ಕಾಮಗಾರಿ ಮಾಡಿರೋದಲ್ಲದೇ ನಾಲೆಗೆ ಹೊಸ ಗೇಟ್ ಅಳವಡಿಸದೇ ಬಿಲ್ ಪಾವತಿ ಮಾಡಿದ್ದಾರೆ ಎಂಬ ಅರೋಪ ಕೇಳಿಬಂದಿದೆ. ಇದನ್ನೂ ಓದಿ: ಗ್ಯಾರಂಟಿ ಎಫೆಕ್ಟ್: ಬೆಳಗಾವಿಯ ಏಕೈಕ ಯೋಗ & ಪ್ರಕೃತಿ ಚಿಕಿತ್ಸಾಲಯ ಬಂದ್

ಅಂದಹಾಗೆ ಈ ನಾಲೆಯನ್ನ ಆಧುನೀಕರಗೊಳಿಸಿ ಅಭಿವೃದ್ಧಿಪಡಿಸಬೇಕು ಎಂಬುದು ಬಹಳ ವರ್ಷಗಳ ರೈತರ ಬೇಡಿಕೆಯಾಗಿತ್ತು. ಹೀಗಾಗಿ ಹಿಂದಿನ ಬಿಜೆಪಿ ಸರ್ಕಾರ 140 ಕಿಮೀ ನಾಲೆ ಅಭಿವೃದ್ಧಿಗೆ ಮುಂದಾಗಿತ್ತು. ಅದಕ್ಕಾಗಿ 883 ಕೋಟಿ ರೂ. ಯೋಜನೆಯನ್ನ ಸಿದ್ಧಪಡಿಸಿ, ಖಾಸಗಿ ಏಜೆನ್ಸಿಯೊಂದಕ್ಕೆ ಕಾಮಗಾರಿಯ ಗುತ್ತಿಗೆ ನೀಡಿತ್ತು. 2021ರಲ್ಲಿ ಆಧುನೀಕರಣ ಕಾಮಗಾರಿ ಮುಗಿದಿದೆ ಎಂದು ಹಣ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಮುಗಿದ ಮೂರೇ ವರ್ಷಕ್ಕೆ ಕಾಂಕ್ರೀಟ್ ಕಿತ್ತು ಬರ್ತಿದ್ದು, ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಅಲ್ಲದೇ ಕೆ.ಆರ್ ಪೇಟೆ ತಾಲ್ಲೂಕಿನ ಪಿ.ಬಿ ಮಂಚನಹಳ್ಳಿ ಗ್ರಾಮದ ಬಳಿ ಎಸ್ಕೇಪ್ ಗೇಟ್ ಬದಲಾವಣೆ ಮಾಡದಿದ್ರೂ ಗುತ್ತಿಗೆ ಪಡೆದ ಸಂಸ್ಥೆಗೆ ಹಣ ಮಂಜೂರಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತಕ್ಕೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಭ್ರಷ್ಟ ಅಧಿಕಾರಿಗಳನ್ನ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಇನ್ನು ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೂ ರೈತರು ದೂರು ನೀಡಿದ್ದು, ತನಿಖೆ ನಡೆಸುವಂತೆ ನೀರಾವರಿ ಇಲಾಖೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: Ranji Trophy | 74 ವರ್ಷಗಳ ಬಳಿಕ ಮೈಲುಗಲ್ಲು – ಹೆಲ್ಮೆಟ್‌ನಿಂದ ರಣಜಿ ಫೈನಲ್‌ ತಲುಪಿದ ಕೇರಳ!

ಹತ್ತಾರು ವರ್ಷಗಳ ಬೇಡಿಕೆ ಈಡೇರಿತು ಅನ್ನೊ ಸಂಭ್ರಮದಲ್ಲಿದ್ದ ರೈತರಿಗೆ ಕಳಪೆ ಕಾಮಗಾರಿ ಶಾಕ್ ತಂದೊಡ್ಡಿದೆ. ನೂರಾರು ಕೋಟಿ ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಮುಂಬೈ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ಯೋಜನೆಗಳಲ್ಲಿ ‘ವಸತಿ ಜಿಹಾದ್’: ಶಿವಸೇನಾ ನಾಯಕ ಆರೋಪ

Share This Article