ಮಂಡ್ಯ: ರಾಜ್ಯದಲ್ಲಿ ಹಾಗೂ ಮಂಡ್ಯದಲ್ಲಿ ನಡೆಯುತ್ತಿರುವ ಮೈತ್ರಿ ಸರ್ಕಾರದ ಮುಖಂಡರ ವಾಕ್ಸಮರ ಇಂದಿನಿಂದ ನಿಲ್ಲುತ್ತದೆ. ಎಲ್ಲಾ ನಾಯಕರಿಗೂ ಜ್ಞಾನೋದಯವಾಗಿದೆ ಎಂದು ಸಚಿವ ಜಿ.ಟಿ ದೇವೇಗೌಡ ಅವರು ಹೇಳಿದ್ದಾರೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ನಾಯಕರು ಕುಳಿತು ಮಾತನಾಡಿದ್ದಾರೆ. ನಾವೆಲ್ಲರು ಒಗ್ಗಾಟ್ಟಾಗಿದ್ದು ಒಂದೇ ತಟ್ಟೆಯಲ್ಲಿ ಊಟ ಮಾಡುವವರು ಎಂದು ಬುದ್ದಿ ಹೇಳಿದ್ದಾರೆ. ಇನ್ನು ಮುಂದೆ ಮೈತ್ರಿ ನಾಯಕರ ವಾಕ್ಸಮರ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ದೇಶದ ಫಲಿತಾಂಶ ಏನಾಗುತ್ತೆ ಎಂದು ಮೇ 23ರ ತನಕ ಕಾಯುತ್ತಾ ಇದ್ದಾರೆ. ದೇಶದಲ್ಲಿ ಏನಾಗುತ್ತೆ ಯಾರು ಪ್ರಧಾನಿಯಾಗುತ್ತಾರೆ ಎಂದು ಆ ದಿನ ತೀರ್ಮಾನವಾಗುತ್ತದೆ. ಅದನ್ನು ಬಿಟ್ಟರೆ ರಾಜ್ಯದ ರಾಜಕೀಯದ ಮೇಲೆ ಈ ಫಲಿತಾಂಶದಿಂದ ಏನೂ ಆಗುವುದಿಲ್ಲ ಎಂದರು.
ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಹೋಗುತ್ತೆ ಎನ್ನುತ್ತಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇನ್ನೂ ನಾಲ್ಕು ವರ್ಷದ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುತ್ತಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುತ್ತೆ ಹಾಗೆಯೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ್ ಇರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಕಾಂಗ್ರೆಸ್ ನಾಯಕರನ್ನು ಕುಮಾರಸ್ವಾಮಿ ಕರೆಯಬೇಕಿತ್ತು ಎಂಬ ವಿಚಾರಕ್ಕೆ ಪ್ರತಿಕ್ರಿಸಿದ ಅವರು, ಈಗಾಗಲೇ ಚುನಾವಣೆ ಮುಗಿದು ಹೋಗಿದೆ. ಅದೆಲ್ಲಾ ಮುಗಿದ ವಿಚಾರ ಅದರ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.