– ಪೊಲೀಸರ ವಿರುದ್ಧ ಆಕ್ರೋಶ
ಮಂಡ್ಯ: ಇಲ್ಲಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜದ ಪರ ಪ್ರತಿಭಟನೆ ನಡೆಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ರೌಡಿಶೀಟರ್ ಯಾಕೆ ತೆಗೆಯಬಾರದು ಎಂದು ಸಮಜಾಯಿಸಿ ಕೊಡುವಂತೆ ಪೊಲೀಸರು ನೋಟಿಸ್ ಹೊರಡಿಸಿದ್ದಾರೆ.
ಪ್ರತಿಭಟನೆ ಸಂಬಂಧ ಈಗಾಗಲೇ ಹಲವರ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಇದೀಗ ಈ ಪೈಕಿ ವಿಹೆಚ್‍ಪಿಯ ಮೈಸೂರು ಭಾಗದ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು ಸೇರಿದಂತೆ ಕಾರ್ತಿಕ್ ಹಾಗೂ ಹರೀಶ್ ಎಂಬವರಿಗೆ ನೋಟಿಸ್ ಕಳುಹಿಸಲಾಗಿದೆ. ಈ ನೋಟಿಸ್ ವಿರುದ್ಧ ಹಿಂದೂ ಕಾರ್ಯಕರ್ತರು ಕೆರಗೋಡಿನ ಧ್ವಜ ಸ್ತಂಭಕ್ಕೆ ಪೂಜೆ ಮಾಡಿ ಬಳಿಕ ಪೊಲೀಸ್ ಠಾಣೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ವೇಳೆ, ಹಿಂದೂ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿದರು. ಬಳಿಕ ಡಿವೈಎಸ್‍ಪಿಗೆ ಮನವಿ ಸಲ್ಲಿಸಿ ಕೆರಗೋಡು ಠಾಣೆಯ ಎಸ್‍ಐ ಹಾಗೂ ಪಿಎಸ್‍ಐ ಮೇಲೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಡಿವೈಎಸ್‍ಪಿ ಈ ಬಗ್ಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಡಲಾಯಿತು.
ಏನಿದು ಪ್ರಕರಣ?: ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ಪಡೆದು, ಹನುಮ ಧ್ವಜ ಹಾರಿಸಿದ್ದರು. ಬಳಿಕ 108 ಅಡಿ ಧ್ವಜಸ್ತಂಭದಲ್ಲಿದ್ದ ಹನುಮ ಧ್ವಜವನ್ನು ಪೊಲೀಸರು ಕೆಳಗಿಳಿಸಿದ್ದರು. ಇದರ ವಿರುದ್ಧ ಹಿಂದೂ ಕಾರ್ಯಕರ್ತರು ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟಿಸಿದ್ದರು. ಈ ವೇಳೆ ಕೆಲವೆಡೆ ಅಹಿತಕರ ಘಟನೆಗಳು ನಡೆದಿದ್ದವು.