ಮಂಡ್ಯ: ಹುತಾತ್ಮ ಯೋಧ ಗುರು.ಎಚ್ ಅವರ ಅಂತ್ಯಕ್ರಿಯೆ ಜನಸಾಗರದ ನಡುವೆ ಶನಿವಾರ ರಾತ್ರಿ ಮದ್ದೂರು ತಾಲೂಕಿನ ಗುಡಿಗೇರಿ ಸಮೀಪದ ಮೆಳ್ಳಹಳ್ಳಿಯಲ್ಲಿ ನೆರವೇರಿತು.
ಅಂತ್ಯ ಕ್ರಿಯೆಗೂ ಮುನ್ನ ಗುರು ಅವರ ನಿವಾಸದಲ್ಲಿ ಕೆಲ ಹೊತ್ತು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ದುಃಖದ ನಡುವೆ ಪತಿಗೆ ಸೆಲ್ಯೂಟ್ ಹೊಡೆದು ದೇಶಪ್ರೇಮ ಮೆರೆದರು. ಇದನ್ನು ಓದಿ: ರಸ್ತೆಯ ಇಕ್ಕೆಲಗಳಲ್ಲಿ ಜನ ಸಾಗರ: ವೀರಯೋಧನಿಗೆ ಕನ್ನಡಿಗರ ನಮನ
Advertisement
Advertisement
ಪುತ್ರನ ಪಾರ್ಥಿವ ಶರೀರ ನೋಡಿದ ತಂದೆ ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಈ ವೇಳೆಯೇ ಗುರು ಅವರಿಗೆ ಸಂಬಂಧಿಸಿದ ವಸ್ತುಗಳನ್ನು ಸಿಆರ್‍ಪಿಎಫ್ ಯೋಧರು ಹಸ್ತಾಂತರ ಮಾಡಿದರು.
Advertisement
ಗುಡಿಗೆರೆ ಕಾಲೊನಿ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಸೇರಿ ಅಂತಿಮ ದರ್ಶನ ಪಡೆದರು. ಮುರುಘಾ ಶ್ರೀಗಳು ಕೂಡ ಗ್ರಾಮಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಸುಮಾರು 15 ನಿಮಿಷದ ಬಳಿಕ ಅಂತ್ಯಕ್ರಿಯೆ ಸ್ಥಳದತ್ತ ಗುರು ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಇದನ್ನು ಓದಿ: ಯೋಧನಾದ್ರೂ ಮೂಲ ಕಸುಬು ಮರೆತಿರಲಿಲ್ಲ ವೀರ ಪುತ್ರ
Advertisement
ಅಂತ್ಯಕ್ರಿಯೆ ನಡೆಯುವ ಜಾಗದಲ್ಲಿ ಸೇರಿದ್ದ ಸಾವಿರಾರು ಜನರು ವಂದೇ ಮಾತರಂ, ಯೋಧ ಗುರೂಗೆ ಜೈ ಎಂದು ಒಕ್ಕೊರಲಿನ ಘೋಷಣೆ ಕೂಗಿದರು. ಈ ವೇಳೆ ಪೊಲೀಸರು ಅಂತ್ಯಕ್ರಿಯೆ ಜಾಗದಲ್ಲಿ ನಿಂತಿದ್ದ ಜನರನ್ನು ಹಿಂದೆ ಸರಿಸಿ, ಗುರು ಅವರ ಕುಟುಂಬಸ್ಥರಿಗೆ ಹಾಗೂ ಗಣ್ಯರಿ ಭದ್ರತೆ ಒದಗಿಸಿದರು. ಬಳಿಕ ರಾಷ್ಟ್ರಗೀತೆ ಹೇಳುವ ಮೂಲಕ ವೀರ ಯೋಧ ಗುರು ಅವರಿಗೆ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಿ ಮಡಿವಾಳ ಸಂಪ್ರದಾಯದಂತೆ ರಾತ್ರಿ 8.30ಕ್ಕೆ ಅಂತ್ಯಕ್ರಿಯೆ ನಡೆಸಲಾಯಿತು. ಸಹೋದರ ಮಧು ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದನ್ನು ಓದಿ: ನಿನ್ನೆಯಿಂದ ಪತಿಯನ್ನು ಕಾಯ್ತಿದ್ದೇನೆ, ಇನ್ನು ಬಂದಿಲ್ಲ: ಯೋಧನ ಪತ್ನಿಯ ಕಣ್ಣೀರು
ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೇಂದ್ರ ಸಚಿವ ಸದಾನಂದ ಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರಾದ ಎಂ.ಶ್ರೀನಿವಾಸ್, ಸುರೇಶ್‍ಗೌಡ, ಎಂಎಲ್‍ಸಿ ಕೆಟಿ.ಶ್ರೀಕಂಠೇಗೌಡ, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಅನೇಕ ಗಣ್ಯರು ಗುರು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅಂತ್ಯಕ್ರಿಯೆಯಲ್ಲಿ ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾಗರೋಪಾದಿಯಲ್ಲಿ ಜನರು ಸೇರಿದ್ದರು.
https://www.youtube.com/watch?v=B9rOIgx736A
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv