– ಮಂಡ್ಯ ಜನತೆಗೆ ಕರಾಳವಾದ ಶನಿವಾರ
– 9 ಪುಟ್ಟ ಮಕ್ಕಳು, 15 ಮಹಿಳೆಯರು, 6 ಪುರುಷರು ಜಲಸಮಾಧಿ
ಮಂಡ್ಯ: ಎಲ್ಲಿ ನೊಡಿದರೂ ಹೆಣಗಳ ರಾಶಿ. ಮುಗಿಲುಮುಟ್ಟಿದ ಆಕ್ರಂದನ. ಎಲ್ಲಿ ನೋಡಿದರೂ ಜನವೋ ಜನ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿಯ ವಿಸಿ ನಾಲೆ ಬಳಿ.
ದುರಂತಕ್ಕೀಡಾದ ರಾಜ್‍ಕುಮಾರ ಬಸ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದು ವದೇಸಮುದ್ರ ಗ್ರಾಮದವರು. ಅಷ್ಟೇ ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿರುವುದು ಅದೇ ಗ್ರಾಮದವರು ಎನ್ನುವುದು ಮತ್ತಷ್ಟು ಆಘಾತ ನೀಡುತ್ತದೆ. ಸುಮಾರು 9 ಮಂದಿ ವದೇಸಮುದ್ರದ ನಿವಾಸಿಗಳು ಮೃತಪಟ್ಟಿದ್ದಾರೆ. ಅದರಲ್ಲೂ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇದನ್ನು ಓದಿ: 30 ಜನರ ಬಲಿ ತೆಗೆದುಕೊಂಡ ಮಂಡ್ಯ ದುರಂತಕ್ಕೆ ಕಾರಣ ಸಿಕ್ತು!
ಮಂಜುಳಾ (59), ಮಗಳು ರಾಧಾ (30) ಜೊತೆಗಿದ್ದ, ರಾಧಾ ಅವರ ಇಬ್ಬರು ಪುತ್ರಿಯರಾದ ಲಿಖಿತಾ ಮತ್ತು ಪ್ರೇಕ್ಷಾ ಮೃತಪಟ್ಟಿದ್ದಾರೆ. ಘಟನಾ ಸ್ಥಳದಿಂದ ಎರಡು ಕಿ.ಮೀ. ದೂರದಲ್ಲಿ ಪ್ರೇಕ್ಷಾ ಮೃತದೇಹ ಪತ್ತೆಯಾಗಿದ್ದು, ಜನ ಸೇರಿದ್ದ ಜಾಗಕ್ಕೆ ಬಾಲಕಿಯ ಶವವನ್ನು ತರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಘಟನೆಯ ಕುರಿತು ಸ್ಥಳಕ್ಕೆ ದೌಡಾಯಿಸಿದ ಮಂಡ್ಯ ಜಿಲ್ಲಾಸ್ಪತ್ರೆ ವೈದ್ಯರು, ಸ್ಥಳದಲ್ಲಿಯೇ ಶಾಮಿಯಾನ ಕಟ್ಟಿ ಮಂತ್ರಿಗಳು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಮೃತರ ಬಂಧುಗಳನ್ನು ಸಂತೈಸಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕಸರತ್ತು ನಡೆಸಿದ್ದು ಕಂಡುಬಂತು. ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಈ ಸಂದರ್ಭಕ್ಕೆ ಸಾಕ್ಷಿಯಾದರು.
ಮೃತಪಟ್ಟವರ ವಿವರ:
ವದೇಸಮುದ್ರ ಗ್ರಾಮದ ರವಿಕುಮಾರ್ (12), ಲಿಖಿತ (05), ಪವಿತ್ರ (11), ಕರಿಯಪ್ಪ (65), ಚಿಕ್ಕಯ್ಯ (60), ಕಮಲಮ್ಮ (55), ಪ್ರಶಾಂತ್ (15), ರತ್ನಮ್ಮ (60), ಶಶಿಕಲಾ (45), ಚಿಕ್ಕಕೊಪ್ಪಲು ಗ್ರಾಮದ ಚಂದ್ರು (35), ಪಾಪಣ್ಣ (66), ಯಶೋಧ (18), ಪೂಜಾರಿ ಕೆಂಪಯ್ಯ (50), ದಿವ್ಯ, ಬೇಬಿ ಗ್ರಾಮದ ನಿವಾಸಿ ಈರಯ್ಯ (60), ಕೋಡಿಶೆಟ್ಟಿಪುರ ನಿವಾಸಿಗಳಾದ ಕಲ್ಪನಾ (11), ದೇವರಾಜು (40), ಸೌಮ್ಯ (05), ಕನಗನಮರಡಿಯ ರತ್ಮಮ್ಮತಿ ರಾಮಕೃಷ್ಣ (50) ಹಾಗೂ ನಿಂಗಮ್ಮ (70) ಮೃತಪಟ್ಟಿದ್ದಾರೆ.
ಭುಜವಳ್ಳಿಯ ಪ್ರೀತಿ (15), ಬೂಕನಕೆರೆ ನಿವಾಸಿ ಸಾವಿತ್ರಮ್ಮ (40), ಡಾಮಡಹಳ್ಳಿ ಗ್ರಾಮದ ಮಂಜುಳ (60) ಹಾಗೂ ಪ್ರೇಕ್ಷಾ (02), ಗಾಣದ ಹೊಸೂರುನ ಅನುಷ (17), ಹುಲ್ಕೆರೆಯ ಸುಮತಿ (35), ಚಿಕ್ಕಾಡೆಯ ಸೌಮ್ಯ ಉಮೇಶ್ (30), ಹುಲಿಕೆರೆಕೊಪ್ಪಲುನ ಮಣಿ (35), ಕಟ್ಟೇರಿ ಗ್ರಾಮದ ಶಿವಮ್ಮ (50), ದೊಡ್ಡಕೊಪ್ಪಲು ಜಯಮ್ಮ (50) ಸಾವನ್ನಪ್ಪಿದ್ದಾರೆ. ಇದನ್ನು ಓದಿ: ಬಸ್ಸಿನ ಆಯಸ್ಸು ಮುಗಿದಿದ್ದರೂ 3 ವರ್ಷ ಚಾಲನೆ ಮಾಡಿದ್ದು ಹೇಗೆ: ಮಂಗ್ಳೂರು ಮಾಲೀಕ
https://youtu.be/NeBth9rLQY0
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv