ಹೈದರಾಬಾದ್: ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನು ಕೊಂದ ವ್ಯಕ್ತಿಯನ್ನು ಹೈದರಾಬಾದ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಓಮನ್ ನಲ್ಲಿ ಸಿಸಿಟಿವಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ 32 ವರ್ಷದ ಕನ್ಹೈಯ್ಯ ಗುಪ್ತಾ ಬಂಧಿತ ಆರೋಪಿ. ಈತ ಪೂರ್ವ ಕಂಡಿವಲಿಯ ಅಪ್ಪಾ ಪಾಡಾ ನಿವಾಸಿಯಾಗಿದ್ದ. ತನ್ನ ಹೆಂಡತಿಯೊಂದಿಗೆ ಬಾಡಿಗೆದಾರ ರಮೇಶ್ ಚೆನಾರಾ ಅಕ್ರಮ ಸಂಬಂಧ ಹೊಂದಿದ್ದಾನೆಂದು ಕನ್ಹೈಯ್ಯ ಅನುಮಾನಿಸಿದ್ದ. ಇಬ್ಬರನ್ನೂ ಬೇರ್ಪಡಿಸುವ ಸಲುವಾಗಿ ಕಳೆದ ವರ್ಷ ತನ್ನ ಹೆಂಡತಿಗೆ ಏನೋ ಸುಳ್ಳು ಹೇಳಿ ಆಕೆಯನ್ನ ಬಿಹಾರದ ತವರುಮನೆಗೆ ಕಳಿಸಿ, ತಾನು ಕೆಲಸ ಮಾಡುತ್ತಿದ್ದ ಓಮನ್‍ಗೆ ಹಿಂದಿರುಗಿದ್ದ.
Advertisement
ಆರೋಪಿ ತನ್ನ ಕೆಲಸ ಮುಂದುವರೆಸಿ, ಮಾರ್ಚ್ 7ರಂದು ಮುಂಬೈಗೆ ವಾಪಸ್ಸಾಗಿದ್ದ. ಮುಂಬೈಗೆ ಬಂದ ಮೇಲೆ ರಮೇಶ್ ಜೊತೆ ಮನೆ ಭೋಗ್ಯದ ಒಪ್ಪಂದದ ಬಗ್ಗೆ ಮಾತನಾಡಬೇಕೆಂದು ಹೇಳಿ, ಆತನೊಂದಿಗೆ ಭೇಟಿ ಮಾಡಿಸುವಂತೆ ಅದೇ ಏರಿಯಾದಲ್ಲಿ ವಾಸವಿದ್ದ ತನ್ನ ಸಹೋದರ ಪ್ರಭು ಕುಮಾರ್ ಗೆ ಕೇಳಿದ್ದ. ಮಾರ್ಚ್ 9ರಂದು ರಮೇಶ್ ಮಲಾಡ್ ನಲ್ಲಿ ಕನ್ಹೈಯ್ಯ ನನ್ನು ಭೇಟಿ ಮಾಡಿದ್ದ. ಅಲ್ಲಿಂದ ಇಬ್ಬರೂ ಆಟೋದಲ್ಲಿ ಮೀರಾ ರೋಡ್‍ಗೆ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Advertisement
ನಂತರ ಕನ್ಹೈಯ್ಯ ರಮೇಶ್‍ನನ್ನು ಕಾಶಿಮಿರಾದಲ್ಲಿ ಕಾಡಿನೊಳಗೆ ಕರೆದುಕೊಂಡು ಹೋಗಿದ್ದ. ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಕನ್ಹೈಯ್ಯ ರಮೇಶ್‍ನನ್ನು ಪ್ರಶ್ನಿಸಿದ್ದ. ಬಳಿಕ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಜಗಳ ವಿಕೋಪಕ್ಕೇರಿ ಕನ್ಹೈಯ್ಯ ಕಾಡಿನಲ್ಲಿ ಬಿದ್ದಿದ್ದ ಹೆಲ್ಮೆಟ್ ತೆಗೆದುಕೊಂಡು ರಮೇಶ್ ತಲೆ ಮೇಲೆ ಹೊಡೆದಿದ್ದ. ಇದರಿಂದ ರಮೇಶ್ ಕುಸಿದು ಬಿದ್ದಿದ್ದು, ಆತ ಸಾಯುವವರೆಗೆ ಕನ್ಹೈಯ್ಯ ಪದೇ ಪದೇ ತಲೆ ಮೇಲೆ ಹೆಲ್ಮೆಟ್‍ನಿಂದ ಹೊಡೆದಿದ್ದ ಎಂದು ತನಿಖಾ ತಂಡದ ಭಾಗವಾಗಿರುವ ಕಾಶಿಮಿರಾ ಕ್ರೈಂ ಬ್ರಾಂಚ್‍ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement
ಮಾರ್ಚ್ 12ರಂದು ಸ್ಥಳೀಯರು ರಮೇಶ್ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ಮಾರ್ಚ್ 10ರಂದು ಕುರಾರ್ ಪೊಲೀಸ್ ಠಾಣೆಯಲ್ಲಿ ರಮೇಶ್ ಕಾಣೆಯಾಗಿದ್ದಾನೆಂದು ದೂರು ದಾಖಲಾಗಿರುವುದು ಗೊತ್ತಾಗಿತ್ತು. ನಂತರ ಪೊಲೀಸರು ಆತನ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದ್ದು, ಕೊನೆಯದಾಗಿ ರಮೇಶ್‍ಗೆ ಪ್ರಭು ಗುಪ್ತಾನಿಂದ ಕರೆ ಬಂದಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಭು ಗುಪ್ತನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ನಂತರ ಪ್ರಭು ಕನ್ಹೈಯ್ಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದ.
Advertisement
ಪೊಲೀಸರು ಕನ್ಹೈಯ್ಯ ನ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದಾಗ ಆತ ಹೈದರಾಬಾದ್‍ನಲ್ಲಿರುವುದು ಗೊತ್ತಾಗಿತ್ತು. ಬಳಿಕ ಪೊಲೀಸ್ ತಂಡ ಅಲ್ಲಿಗೆ ಹೋಗಿದ್ದು, ಕನ್ಹೈಯ್ಯ ಓಮನ್‍ಗೆ ಹೋಗಲು ವಿಮಾನವೇರುವ ಮುನ್ನವೇ ಆತನನ್ನು ವಶಕ್ಕೆ ಪಡೆದಿದ್ದಾರೆ.
ಕನ್ಹೈಯ್ಯ ಓಮನ್‍ಗೆ ಹೋಗಲು ಟಿಕೆಟ್ ಗಾಗಿ ಕಾಯುತ್ತಾ ತನ್ನ ಸ್ನೇಹಿತನ ಮನೆಯಲ್ಲಿದ್ದ. ದೇಶವನ್ನ ಬಿಟ್ಟು ಹೋಗುವ ಮುನ್ನವೇ ಆರೋಪಿಯನ್ನ ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.