ಧಾರವಾಡ: ಪೋಕ್ಸೋ ಕೇಸ್ನಲ್ಲಿ ಕಳೆದ ವರ್ಷ ಜೈಲು ಸೇರಿದ್ದ ಆರೋಪಿ ಜಾಮೀನಿನ ಮೇಲೆ ಹೊರ ಬಂದು, ಕೇಸ್ ದಾಖಲಿಸಿದ್ದ ಮಹಿಳೆಗೆ ಚಾಕು ಇರಿದಿದ್ದಾನೆ. ಮಾತ್ರವಲ್ಲದೇ ಮಹಿಳೆಯ ಅಪ್ರಾಪ್ತ ಮಗಳನ್ನೂ ಆತ ಹೊತ್ತೊಯ್ದಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಪರಶುರಾಮ್ ಲಮಾಣಿ ಕಳೆದ ವರ್ಷ ಪೋಕ್ಸೋ ಕೇಸ್ನಲ್ಲಿ ಜೈಲು ಸೇರಿದ್ದ. ಈ ವರ್ಷ ಏಪ್ರಿಲ್ನಲ್ಲಿ ಜಾಮೀನಿನ ಮೇಲೆ ಆತ ಹೊರ ಬಂದಿದ್ದ. ಶುಕ್ರವಾರ ರಾತ್ರಿ ಪರಶುರಾಮ್ ತನ್ನ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಜೀಜಾಬಾಯಿಗೆ ಚಾಕು ಇರಿದಿದ್ದಾನೆ.
ಕಳೆದ ವರ್ಷ ಪರಶುರಾಮ್ ಜೀಜಾಬಾಯಿಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ. ಹೀಗಾಗಿ ಜೀಜಾಬಾಯಿ ಪರಶುರಾಮ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿದ್ದರು. ಈ ಸೇಡನ್ನು ತೀರಿಸಿಕೊಳ್ಳಲು ಪರಶುರಾಮ್ ಮಹಿಳೆ ಮನೆಗೆ ಹೋಗಿದ್ದು, ಕೃತ್ಯ ಎಸಗಿ ಮಗಳನ್ನೂ ಕರೆದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ಉತ್ತರ ಪ್ರದೇಶದ ಜೈಲು ನಿಯಮಗಳಲ್ಲಿ ಬದಲಾವಣೆ – ಏನಿದೆ ಹೊಸ ರೂಲ್ಸ್?
ಪರಶುರಾಮ್ ಹಾಗೂ ಜೀಜಾಬಾಯಿ ಮಗಳ ನಡುವೆ ಪ್ರೇಮವಿತ್ತು. ಮಗಳು ಅಪ್ರಾಪ್ತೆ ಇದ್ದ ಕಾರಣ ಆಕೆಯ ರಕ್ಷಣೆಗೆ ಜೀಜಾಬಾಯಿ ನಿಂತಿದ್ದರು. ಆದರೆ ಜೀಜಾಬಾಯಿಗೆ ಚಾಕು ಇರಿಯಲು ಪರಶುರಾಮ್ಗೆ ಮಗಳೂ ಸಾತ್ ನೀಡಿದ್ದಳು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಎಲ್ಲ ಶಾಸಕರಿಗೆ 50 ಲಕ್ಷ, ಅಡ್ಡ ಮತಕ್ಕೆ ಕಾರಣವೇನು? – ಹಳೇ ಕಥೆ ಬಿಚ್ಚಿಟ್ಟ ಶ್ರೀನಿವಾಸ್ ಗೌಡ
ಈ ಸಂಬಂಧ ಜೀಜಾಬಾಯಿ ಧಾರವಾಡ ಉಪನಗರ ಠಾಣೆಯಲ್ಲಿ ಪರಶುರಾಮ್ ಮೇಲೆ ದೂರನ್ನು ನೀಡಿದ್ದಾರೆ. ಕೊಲೆ ಪ್ರಯತ್ನ ಹಾಗೂ ಮಗಳನ್ನು ಅಪಹರಣ ಮಾಡಿರುವುದಾಗಿ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2 ತಂಡಗಳನ್ನು ರಚಿಸಿ, ಆರೋಪಿಯನ್ನು ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಲಾಬುರಾಮ್ ತಿಳಿಸಿದ್ದಾರೆ.