ಮಡಿಕೇರಿ: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ಕೊಡಗಿನ (Kodagu) ವಿರಾಜಪೇಟೆಯ (Virajpet) ತೋರ ಗ್ರಾಮದಲ್ಲಿ ಶನಿವಾರ ತಡ ರಾತ್ರಿ ನಡೆದಿದೆ.
ಗ್ರಾಮದ ಬೈಮನ ನಾಣಯ್ಯ ಅವರ ಪುತ್ರ ಬಿ.ಎಂ ಮಧು (44) ಮೃತ ದುರ್ದೈವಿ. ರಾತ್ರಿ 12ರ ವೇಳೆಗೆ ಗ್ರಾಮದ ಪಡಚಿಕಾಡು ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ. ತೋಟದ ರಸ್ತೆ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವಾರು ವರ್ಷಗಳಿಂದ ಮಧು ಹಾಗೂ ಊರಿನ ಕೆಲವರ ನಡುವೆ ಮನಸ್ತಾಪ ಇತ್ತು ಎಂದು ಹೇಳಲಾಗಿದೆ. ಇದನ್ನೂ ಓದಿ: ಬಿಜೆಪಿಯ ಮತ್ತೊಂದು ವಿಕೆಟ್ ಪತನ – ಸಂಸದ ಸ್ಥಾನಕ್ಕೂ ರಾಜೀನಾಮೆಗೆ ಮುಂದಾದ ಕರಡಿ ಸಂಗಣ್ಣ
ಮಧು, ಶನಿವಾರ ಸಂಜೆ 7 ಗಂಟೆಯಿಂದ ಸ್ನೇಹಿತರೊಂದಿಗೆ ಸೇರಿಕೊಂಡು ಮದ್ಯಪಾನ ಮಾಡಿದ್ದರು. ರಾತ್ರಿ ವೇಳೆ ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ಈ ಮೊದಲು ಮಧು ಬೆಂಗಳೂರಿನಲ್ಲಿ (Bengaluru) ಉದ್ಯಮಿಯಾಗಿದ್ದರು. ಕಳೆದ ಒಂದು ವರ್ಷದ ಹಿಂದೆ ಊರಿಗೆ ಮರಳಿ ತೋಟವನ್ನು ನೋಡಿಕೊಂಡು, ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡಿದ್ದರು.
ಘಟನಾ ಸ್ಥಳಕ್ಕೆ ಕೊಡಗು ಎಸ್‍ಪಿ ರಾಜರಾಜನ್ ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಸಿದ್ದುಗೆ `ಅಹಿಂದ’ ಪದದ ಅರ್ಥವೇ ಗೊತ್ತಿಲ್ಲ – ಕಣ್ಣೀರಿಟ್ಟ ಗೋಪಿಕೃಷ್ಣ ದಂಪತಿ