ಕೊಯಮತ್ತೂರು: ಸಾರಿಗೆ ಉದ್ಯಮಿಯೊಬ್ಬ ಎಂಟು ಮದುವೆಯಾಗಿ ಸುಮಾರು 4.5 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈನ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿಯಾಗಿರುವ ಇಂದಿರಾ ಗಾಂಧಿ ಎಂಬವರು ಈ ಕುರಿತು ದೂರು ನೀಡಿದ ಬಳಿಕ ಉದ್ಯಮಿಯ ನಿಜ ಬಣ್ಣ ಈಗ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ 57 ವರ್ಷದ ಪುರುಷೋತ್ತಮ್ ಎಂಬಾತನನ್ನು ಇಂದಿರಾ ಗಾಂಧಿ ಎಂಬವರು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ಇಂದಿರಾ ತಮ್ಮ ಹೆಸರಿನಲ್ಲಿ ಚೆನ್ನೈನಲ್ಲಿರುವ ಬಂಗಲೆಯೊಂದನ್ನು ಮಾರಾಟ ಮಾಡಿ ಕೊಯಮತ್ತೂರ್ ನಲ್ಲಿ ಜೀವನ ಸಾಗಿಸುವ ಆಸೆಯನ್ನು ತಮ್ಮ ಪತಿ ಪುರುಷೋತ್ತಮ್ ಬಳಿ ಹಂಚಿಕೊಂಡಿದ್ದರು. ಆದರೆ ಮನೆ ಮಾರಾಟ ಮಾಡಿದ ಬಳಿಕ ಬಂದ 1.5 ಕೋಟಿ ಹಣದೊಂದಿಗೆ ಪುರುಷೋತ್ತಮ್ ಪರಾರಿಯಾಗಿದ್ದಾನೆ.
ಈ ವಿಚಾರ ತಿಳಿದ ಇಂದಿರಾ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಪುರುಷೋತ್ತಮ್ ಇತಿಹಾಸ ಕಂಡು ಬೆಚ್ಚಿಬಿದ್ದಿದ್ದಾರೆ. ಈತ ಇಂದಿರಾರನ್ನು ಮದುವೆಯಾಗುವುದಕ್ಕೂ ಮುನ್ನ ಮೂವರು ಮಹಿಳೆಯರನ್ನು ಮದುವೆಯಾಗಿದ್ದು, ಅಲ್ಲದೇ ಆತ ಮದುವೆಯಾಗಿದ್ದ ಇಂದಿರಾ ಅವರು ಸೇರಿ ಮೂವರು ಮಹಿಳೆಯರ ಬಳಿ ಒಟ್ಟಾರೆ 4.5 ಕೋಟಿ ಹಣ ವಂಚಿಸಿ ಪರಾರಿಯಾಗಿದ್ದಾನೆ. ಆದರೆ ಇಂದಿರಾ ಅವರನ್ನು ಮದುವೆಯಾದ ಬಳಿಕ ಮತ್ತೆ ಮೂರು ಮದುವೆಯಾಗಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ ಮದುವೆಯಾಗಿದ್ದ ಕುಮದವಳ್ಳಿ ಎಂಬ ಮಹಿಳೆ ದೂರಿನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಪುರುಷೋತ್ತಮ್ ತನ್ನ ಆಸ್ತಿ ಕುರಿತು ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಈ ಆಸ್ತಿ ತನ್ನ ಹೆಸರಿಗೆ ಬಂದರೆ 17 ಕೋಟಿ ರೂ. ಬರುತ್ತದೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವುದರಿಂದ ಹಣದ ಅಗತ್ಯವಿದೆ ಎಂದು ಹೇಳಿ ಕುಮದುವಳ್ಳಿ ಅವರ ಆಸ್ತಿಯನ್ನು ಮಾರಾಟ ಮಾಡಿ 3 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದ ಎಂದು ತಿಳಿಸಿದ್ದಾರೆ.
ಪುರುಷೋತ್ತಮ್ ವೈವಾಹಿಕ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಸ್ಥೆ ನಡೆಸುತ್ತಿರುವ ಮೋಹನ್ ಹಾಗೂ ವಿಜಯ ಕುಮಾರಿ ಎಂಬವರ ಜೊತೆ ಸೇರಿ ಈ ಕೃತ್ಯ ನಡೆಸಿದ್ದಾನೆ. ಈತನಿಂದ ಹಣ ಪಡೆದು ಸಂಸ್ಥೆ ಮಾಲೀಕರು ಈತನಿಗೆ ಹೆಚ್ಚು ಹಣ ಹೊಂದಿರುವ ಶ್ರೀಮಂತ ಮಹಿಳೆಯರನ್ನು ಪರಿಚಯ ಮಾಡಿಸುತ್ತಿದ್ದರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಇಂದಿರಾ ಹಾಗೂ ಮೂವರು ಮಹಿಳೆಯರು ನೀಡಿದ ದೂರಿನ ಮೇರೆಗೆ ಪುರುಷೋತ್ತಮ್ ವಿರುದ್ಧ ಕೊಯಮತ್ತೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಪುರುಷೋತ್ತಮ್ ಹಲವು ಮದುವೆಗಳನ್ನು ಕಾನೂನಾತ್ಮಕವಾಗಿ ರಿಜಿಸ್ಟರ್ ಸಹ ಮಾಡಿಸಿದ್ದು, ಹೆಚ್ಚು ಶ್ರೀಮಂತ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ. ಈತನ ಮೇಲೆ ಈಗಾಗಲೇ 18 ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಕೊಯಮತ್ತೂರು ಪೂರ್ವ ಮಹಿಳಾ ಪೊಲೀಸ್ ಠಾಣೆ ಅಧಿಕಾರಿ ಮಾಸುತಾ ಬೇಗಂ ಹೇಳಿದ್ದಾರೆ.