– ಹೆಣವಿದ್ದ ಸಿಮೆಂಟ್ ಚಪ್ಪಡಿಯ ಮೇಲೆ ಪ್ರತಿದಿನ ಮಲಗ್ತಿದ್ದ
ಭೋಪಾಲ್: ಲಿವಿಂಗ್ ಟುಗೆದರ್‍ನಲ್ಲಿದ್ದ ತನ್ನ ಸಂಗಾತಿಯನ್ನು ಕೊಂದು ಸಿಮೆಂಟ್ ಗೋರಿಯೊಳಗೆ ಆಕೆಯ ಶವವನ್ನು ಹೂತಿಟ್ಟಿದ್ದ ವ್ಯಕ್ತಿಯನ್ನು ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಸಾಕೇತ್ ನಗರದ ನಿವಾಸಿಯಾಗಿದ್ದ 32 ವರ್ಷದ ಉದ್ಯಾನ್ ದಾಸ್ ಬಂಧಿತ ಆರೋಪಿ. ಐಷಾರಾಮಿ ಜೀವನ ನಡೆಸುತ್ತಿದ್ದ ಉದ್ಯಾನ್ ಮರ್ಸೀಡಿಸ್ ಬೆಂಜ್ ಕಾರ್‍ನಲ್ಲಿ ಓಡಾಡುತ್ತಿದ್ದ. ತನ್ನ ಮನೆಯಲ್ಲಿ ಒಬ್ಬನೇ ವಾಸವಿದ್ದ. ಉದ್ಯಾನ್‍ಗೆ ಎರಡು ವರ್ಷದ ಹಿಂದೆ ಫೇಸ್‍ಬುಕ್‍ನಲ್ಲಿ 28 ವರ್ಷದ ಆಕಾಂಕ್ಷಾ ಶರ್ಮಾಳ ಪರಿಚಯವಾಗಿತ್ತು. ಆಕಾಂಕ್ಷಾ 2 ವರ್ಷದ ಹಿಂದೆ ಅಮೆರಿಕಗೆ ಹೋಗುತ್ತಿರುವುದಾಗಿ ಪೋಷಕರಿಗೆ ಹೇಳಿ ಪಶ್ಚಿಮ ಬಂಗಾಳದ ಬಂಕುರಾದ ತನ್ನ ಮನೆಯಿಂದ ಬಂದಿದ್ದಳು. ಅದ್ರೆ ಆಕೆ ಅಮೆರಿಕಗೆ ಹೋಗದೆ ಭೋಪಾಲ್‍ಗೆ ಬಂದು ಉದ್ಯಾನ್ ದಾಸ್‍ನೊಂದಿಗೆ ವಾಸವಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಎರಡು ತಿಂಗಳ ಹಿಂದಿನವರೆಗೆ ಸ್ನೇಹಿತರಿಗೆ ಹಾಗೂ ಕುಟುಂಬಸ್ಥರಿಗೆ ಆಕಾಂಕ್ಷಾಳಿಂದ ಫೋನ್ ಬರುತ್ತಿತ್ತು. ಆದ್ರೆ ಫೋನ್ ಬರೋದು ನಿಂತಾಗ ಅನುಮಾನಗೊಂಡ ಆಕಾಂಕ್ಷಾ ತಂದೆ ಬಂಕುರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಂಕುರಾ ಪೊಲೀಸರು ಕಾಲ್ ಟ್ರೇಸ್ ಮಾಡಿದಾಗ ಭೋಪಾಲ್ ವಿಳಾಸ ಸಿಕ್ಕಿದ್ದು, ಈ ಬಗ್ಗೆ ಉದ್ಯಾನ್ ದಾಸ್‍ನನ್ನು ಪ್ರಶ್ನಿಸಿದ್ದಾರೆ. ಮೊದಲಿಗೆ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ ಉದ್ಯಾನ್ ದಾಸ್, ನಂತರ ಆಕಾಂಕ್ಷಾಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
Advertisement
Advertisement
ಮನೆಯಲ್ಲೇ ಗೋರಿ ಕಟ್ಟಿದ: ಆಕಾಂಕ್ಷಾಳನ್ನು ಕೊಂದ ನಂತರ ಉದ್ಯಾನ್ ಮೊದಲನೇ ಮಹಡಿಯಲ್ಲಿದ್ದ ತನ್ನ ಮನೆಯ ಒಳಗೆಯೇ ಒಂದು ಮರದ ಪೆಟ್ಟಿಗೆಯಲ್ಲಿ ಆಕೆಯ ಮೃತದೇಹವನ್ನು ಹಾಕಿ ಅದರ ಮೇಲೆ ಸಿಮೆಂಟ್, ನೀರು ಮತ್ತು ಕಾಂಕ್ರೀಟ್ ತುಂಬಿ ಚಪ್ಪಡಿಯಂತೆ ಮಾಡಿದ್ದ. ಸಿಮೆಂಟ್ ಒಣಗಿದ ನಂತರ ಇದನ್ನೇ ತನ್ನ ಮಂಚದಂತೆ ಮಾಡಿಕೊಂಡು ಪ್ರತಿದಿನ ಅದರ ಮೇಲೆಯೇ ಮಲಗುತ್ತಿದ್ದುದಾಗಿ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಗುರುವಾರ ರಾತ್ರಿ ಪೊಲೀಸರು ಸುಮಾರು 3 ಗಂಟೆಗಳ ಕಾಲ ಡ್ರಿಲ್ಲಿಂಗ್ ಮಾಡಿ ಸಿಮೆಂಟ್ ಚಪ್ಪಡಿಯೊಳಗಿದ್ದ ಆಕಾಂಕ್ಷಾ ಮೃತದೇಹದ ಅಂಗಾಂಗಗಳನ್ನು ಹೊರತೆಗೆದಿದ್ದಾರೆ.
ಐಷಾರಾಮಿ ಜೀವನ ನಡೆಸ್ತಿದ್ದ: ಪ್ರಕರಣದ ಸಂಬಂಧ ಗ್ರೌಂಡ್ ಫ್ಲೋರ್‍ನಲ್ಲಿ ವಾಸವಿದ್ದ ಉದ್ಯಾನ್ ನೆರೆಹೊರೆಯವರು ಹೇಳಿಕೆ ನೀಡಿದ್ದು, ಆ ಯುವತಿ ಹಲವು ಬಾರಿ ಮನೆಗೆ ಬರೋದನ್ನ ನೋಡಿದ್ದೆವು. ಆದ್ರೆ ಕೊನೆಯ ಬಾರಿ ಆಕೆಯನ್ನು ನೋಡಿದ್ದು ಎರಡು ತಿಂಗಳ ಹಿಂದೆ. ಕಳೆದ 25 ವರ್ಷಗಳಿಂದ ನಮಗೆ ಉದ್ಯಾನ್ ಗೊತ್ತು. ಆದ್ರೆ ಆತ ಯಾರೊಂದಿಗೂ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಆತ ಐಷಾರಾಮಿ ಜೀವನ ನಡೆಸುತ್ತಿದ್ದ. ರಾಯ್‍ಪುರ್‍ನಲ್ಲಿ ಫ್ಯಾಕ್ಟರಿ ಇದೆ ಎಂದು ಹೇಳುತ್ತಿದ್ದ. ಆತ ಅವನ ತಂದೆ ತಾಯಿಗೆ ಒಬ್ಬನೇ ಮಗನಾಗಿದ್ದರಿಂದ ಪೋಷಕರೇ ಆತನಿಗೆ ಹಣ ಕೊಡುತ್ತಿರಬಹುದು ಎಂದುಕೊಂಡಿದ್ದೆವು ಅಂತ ಹೇಳಿದ್ದಾರೆ.
ಪೊಲೀಸರು ಉದ್ಯಾನ್‍ನನ್ನು ವಿಚಾರಣೆ ಮಾಡಿದಾಗ ತಾನು ಐಐಟಿ ಮಾಡಿದ್ದು, ಅಮೆರಿಕದಲ್ಲಿ ಕೆಲಸ ಮಾಡಿದ್ದೆ ಎಂದು ಹೇಳಿದ್ದಾನೆ. ಅಲ್ಲದೆ ಆಕಾಂಕ್ಷಾಳೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದು, ಅಮೆರಿಕದಲ್ಲಿ ವಾಸವಿರುವ ತನ್ನ ತಾಯಿಯನ್ನು ನೋಡಲು ಕೂಡ ಹೋಗಿದ್ದೆವು. ತನ್ನ ತಂದೆ ಕೆಲವು ವರ್ಷದ ಹಿಂದೆ ನಿಧನರಾಗಿರುವುದಾಗಿ ಹೇಳಿದ್ದಾನೆ.
ಕೊಲೆಗೆ ಕಾರಣವೇನು?: ಆಕಾಂಕ್ಷಾಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದ್ದ ವಿಷಯ ತಿಳಿದು ಕೊಲೆ ಮಾಡಿದ್ದಾಗಿ ಉದ್ಯಾನ್ ಹೇಳಿದ್ದಾನಾದ್ರೂ ಕೊಲೆಗೆ ಸೂಕ್ತ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯಕ್ಕೆ ಉದ್ಯಾನ್ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಂಡಿರೋ ಪೊಲೀಸರು, ಸಿಮೆಂಟ್ ಚಪ್ಪಡಿಯಿಂದ ಹೊರತೆಗೆದ ಆಕಾಂಕ್ಷಾ ಅಂಗಾಂಗಗಳನ್ನು ಡಿಎನ್‍ಎ ಪರೀಕ್ಷೆಗಾಗಿ ಕಳಿಸಿದ್ದಾರೆ.