ಚಿಕ್ಕಬಳ್ಳಾಪುರ: ಮದುವೆಯಾಗಿ 8 ತಿಂಗಳು ಕಳೆಯೋದ್ರೊಳಗೆ ಪತಿ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪು (Doddaballapur) ರದ ಶ್ರೀನಗರದಲ್ಲಿ ನಡೆದಿದೆ.
ಮೃತಳನ್ನು ಜೆನಿಲಾ ಜೋಬಿಯಾ ಎಂದು ಗುರುತಿಸಲಾಗಿದ್ದು, ಈಕೆಯನ್ನು ಪತಿ ಸ್ಯಾಮ್ ಕೊಲೆ ಮಾಡಿದ್ದಾನೆ. ಸ್ಯಾಮ್ ದೊಡ್ಡಬಳ್ಳಾಪುರದ ನಿವಾಸಿಯಾಗಿದ್ದು, ಜನಿಲಾ ಜೋಬಿಯಾ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ (Kanyakumari) ಮೂಲದವಳು. ಇವರಿಬ್ಬರಿಗೂ ಕಳೆದ 8 ತಿಂಗಳ ಹಿಂದೆಯಷ್ಟೇ ಮನೆ ಮಂದಿಯೆಲ್ಲಾ ಸೇರಿ ಸಂಭ್ರಮದಿಂದ ಮದುವೆ ಮಾಡಿದರು. ಆದರೆ ಮದುವೆಯಾಗಿ ಕೇವಲ 8 ತಿಂಗಳು ಆಗುವುದರೊಳಗೆ ತಾಳಿ ಕಟ್ಟಿದ ಗಂಡನ ಕೈಯಿಂದಲೇ ಹೆಂಡತಿ ಸಾವನ್ನಪ್ಪಿದ್ದಾಳೆ.
ಸ್ಯಾಮ್ ಹಾಗೂ ಜೋಬಿಯಾ ನಡುವೆ ಮಧ್ಯರಾತ್ರಿ ರೂಂನಲ್ಲಿ ಜೋರು ಜಗಳವಾಗಿದ್ದು, ಜಗಳದ ವೇಳೆ ಸ್ಯಾಮ್ ಚಾಕುವಿನಿಂದ ಜೋಬಿಯಾಳಿಗೆ ಮನಸ್ಸೋ ಇಚ್ಚೆ ಇರಿದಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ಸ್ಯಾಮ್ ಅಪ್ಪ-ಅಮ್ಮ ಹಾಗೂ ಅಕ್ಕಪಕ್ಕದ ಮನೆಯವರು ಏನಾಗ್ತಿದೆ ಯಾಕೆ ಗಲಾಟೆ ಅಂತ ರೂಂ ಬಾಗಿಲು ಬಡಿದು ಒಳಗೆ ಹೋದಾಗ ಸ್ಯಾಮ್ ಮಾಡಿರೋ ಕೃತ್ಯ ಬೆಳಕಿಗೆ ಬಂದಿದೆ. ಸೊಸೆ ಜೋಬಿಯಾ ರಕ್ಷಣೆಗೆ ಮುಂದಾದ ತಂದೆ-ತಾಯಿಯೂ ಮೇಲೂ ಸ್ಯಾಮ್ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ನಂತರ ಸ್ಯಾಮ್ ಸೇರಿ ಎಲ್ಲರೂ ಜೋಬಿಯಾಳನ್ನ ಖಾಸಗಿ ಆಸ್ಪತ್ರೆಗೆ ಕೆರೆದುಕೊಂಡು ಹೋಗಿದ್ರೂ ಜೋಬಿಯಾ ಬದುಕುಳಿದಿಲ್ಲ. ಇದನ್ನೂ ಓದಿ: ಬಟಿಂಡಾ ಸೇನಾ ಠಾಣೆಯೊಳಗೆ ಗುಂಡಿನ ದಾಳಿ – ನಾಲ್ವರು ಸಾವು
ಸ್ಯಾಮ್ ಬೇರೋಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದು ಚಾಟಿಂಗ್ ಮಾಡ್ತಿದ್ದ ಎನ್ನಲಾಗಿದೆ. ಇಲ್ಲ ಹೆಂಡತಿಯೇ ಸ್ಯಾಮ್ ಗೆ ಮೋಸ ಮಾಡಿ ಬೇರೆಯವರ ಜೊತೆ ಚಾಟಿಂಗ್ ಮಾಡ್ತಿದ್ಲಾ ಎಂಬ ಅನುಮಾನವೂ ಮೂಡಿದೆ. ಈ ವಿಚಾರಗಳಿಗೆ ಗಲಾಟೆ ನಡೆದಿರಬಹುದು ಎನ್ನಲಾಗಿದ್ದು, ಇದೇ ಗಲಾಟೆ ಜೋರಾಗಿ ಸ್ಯಾಮ್ ಮೊದಲೇ ಪ್ಲಾನ್ ಮಾಡಿದಂತೆ ಹೆಂಡತಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿ ಸ್ಯಾಮ್ ನನ್ನ ದೊಡ್ಡಬಳ್ಳಾಪುರ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಸ್ಯಾಮ್ ಮಾತ್ರ ಯಾಕೆ ಕೊಲೆ ಮಾಡಿದ ಅಂತ ಬಾಯಿ ಬಿಡ್ತಿಲ್ಲ. ಬದಲಾಗಿ ಅರೆ ಹುಚ್ಚನ ತರ ಪೊಲೀಸರ ದಿಕ್ಕು ತಪ್ಪಿಸೋ ಕೆಲಸ ಮಾಡ್ತಿದ್ದಾನೆ. ಜೆನಿಲಾ ಜೋಬಿಯಾ ಪೋಷಕರು ತಮಿಳುನಾಡಿನಿಂದ ಆಗಮಿಸುತ್ತಿದ್ದು, ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.