ಚಂಡೀಗಢ: 31 ವರ್ಷದ ಪತಿಯೊಬ್ಬ ಕುಡಿತಕ್ಕಾಗಿ ಹಣಗಳಿಸಲು ಪತ್ನಿಯನ್ನೇ ಕೂಡಿ ಹಾಕಿ ತನ್ನ ಸಂಬಂಧಿ ಮತ್ತು ಪಕ್ಕದ ಮನೆಯವನಿಂದ ಸಾಮೂಹಿಕ ಅತ್ಯಾಚಾರ ಎಸಗಲು ಅವಕಾಶ ಮಾಡಿಕೊಟ್ಟಿರುವ ಶಾಕಿಂಗ್ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತೆ ಮೂರು ಮಕ್ಕಳ ತಾಯಿಯಾಗಿದ್ದು, ಪೊಲೀಸರಿಗೆ ಪತಿಯ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಕುಡಿತದ ಚಟಕ್ಕೆ ಬಿದ್ದು, ಮಾರ್ಚ್ ಮೊದಲ ವಾರ ಪತಿಯೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಸಂತ್ರಸ್ತೆಯನ್ನು ರೂಮಿನಲ್ಲಿ ಕೂಡಿ ಹಾಕಿದ್ದು, ಹಣಕ್ಕಾಗಿ ಇಬ್ಬರಿಗೆ ಅತ್ಯಾಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿಯ ಸಂಬಂಧಿ ಮತ್ತು ನೆರೆಮನೆಯಾತ ಸೇರಿಕೊಂಡು ಬಲವಂತದಿಂದ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಮರುದಿನ ಮತ್ತೆ ಅವರಿಬ್ಬರು ಅತ್ಯಾಚಾರ ಮಾಡಲು ಬಂದಿದ್ದಾರೆ. ಆಗ ನಾನು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ. ಇದರಿಂದ ಕೋಪಗೊಂಡ ಪತಿ ನನ್ನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಕೊನೆಗೆ ನಾನು ತಕ್ಷಣ ಅಲ್ಲಿಂದ ಮಕ್ಕಳನ್ನು ಕರೆದುಕೊಂಡು ತಪ್ಪಿಸಿಕೊಂಡೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆಯ ತಾಯಿಗೆ ಈ ಬಗ್ಗೆ ತಿಳಿದು ತಕ್ಷಣ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇರೆಗೆ ಬಿಚೋರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಡಿ (ಗ್ಯಾಂಗ್ ರೇಪ್), 120 ಬಿ (ಕ್ರಿಮಿನಲ್ ಪಿತೂರಿ) ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಮೂವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯಕ್ಕೆ ಸಂತ್ರಸ್ತೆಯ ಪತಿಯನ್ನು ಭಾನುವಾರ ಬಂಧಿಸಲಾಗಿದೆ. ಅತ್ಯಾಚಾರ ಎಸಗಿದ್ದ ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಬಲೆ ಬೀಸಿದ್ದೇವೆ. ಆದರೆ ಈ ಘಟನೆ ನಿಜಕ್ಕೂ ಆಘಾತಕಾರಿಯಾಗಿದೆ. ಮದ್ಯ ಕುಡಿಯಲು ಹಣಕ್ಕಾಗಿ ಪತಿಯೇ ಪತ್ನಿಯನ್ನೇ ಅತ್ಯಾಚಾರ ಮಾಡಿಸಿದ್ದಾನೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.