ಶಿವಮೊಗ್ಗ: ತಾಯಿ ಮೇಲಿನ ದ್ವೇಷಕ್ಕಾಗಿ ಮಗುವನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೂಲೆಗದ್ದೆ ಮಠದಲ್ಲಿ ನಡೆದಿದೆ.
ಮೂರು ವರ್ಷದ ಸುಜಯ್ ಮೃತ ಮಗು. ಸುಜಯ್ ಪೋಷಕರು ಮೂಲಗದ್ದೆ ಮಠದ ನೂತನ ಸ್ವಾಮೀಜಿಯವರ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಣೆ ಪಟ್ಟಣದಿಂದ ಆಗಮಿಸಿದ್ದರು. ಸಂಜಯ್ ತಾಯಿ ಚೈತ್ರ ಅವರ ಮೇಲೆ ಮಠದಲ್ಲಿ ವಾಸವಾಗಿದ್ದ ಕಾಮುಕ ರುದ್ರೇಶ್ ಕಣ್ಣು ಹಾಕಿದ್ದನು. ಎಂಟು ತಿಂಗಳು ಗರ್ಭಿಣಿಯಾಗಿರುವ ಚೈತ್ರ ಅವರು ರುದ್ರೇಶ್‍ನಿಗೆ ಬೈದಿದ್ದರು.
ಇದರಿಂದ ಕೋಪಗೊಂಡ ರುದ್ರೇಶ್ ಸೋಮವಾರ ರಾತ್ರಿ ಅವರ ಊಟಕ್ಕೆ ನಿದ್ರೆ ಮಾತ್ರೆ ಬೆರೆಸಿದ್ದಲ್ಲದೆ, ಪುಟ್ಟ ಕಂದನಿಗೂ ನಿದ್ರೆ ಮಾತ್ರೆ ಹಾಕಿ ಕೊಂದು ನಂತರ ತಾನೇ ತೆಗೆದುಕೊಂಡು ಹೋಗಿ ಹೊಳೆಗೆ ಹಾಕಿ ಬಂದಿದ್ದಾನೆ.
ನಿದ್ರೆ ಮಾತ್ರೆ ಬೆರತ ಊಟ ಮಾಡಿದ ಆರು ಜನ ಬೆಳಗ್ಗೆ ಏಳುತ್ತಿದ್ದಂತೆ ತೀವ್ರ ಅಸ್ವಸ್ಥಗೊಂಡಿದ್ದರು. ತಕ್ಷಣ ಇವರೆಲ್ಲರನ್ನೂ ಮಂಗಳವಾರ ಹೊಸನಗರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಮಯದಲ್ಲಿ ತಮ್ಮ ಜೊತೆ ಮಗ ಸುಜಯ್ ಇಲ್ಲದಿರುವುದೇ ಚೈತ್ರಾ ಅವರಿಗೆ ಗೊತ್ತಾಗಿದೆ.
ಎಲ್ಲಾ ಕಡೆ ಮಗುವಿಗಾಗಿ ಹುಡುಕಾಟ ನಡೆದ ನಂತರ ಮಂಗಳವಾರ ಸಂಜೆ ಮಠದ ಹಿಂಭಾಗದಲ್ಲಿ ಇರುವ ಹೊಳೆಯಲ್ಲಿ ಮಗುವಿನ ಶವ ಸಂಜೆ ಪತ್ತೆ ಆಗಿದೆ. ಅದೂವರೆಗೂ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದು ಆಕಸ್ಮಿಕ ಎಂದೇ ಭಾವಿಸಲಾಗಿತ್ತು. ಪೊಲೀಸರು ಅನುಮಾನದ ಮೇಲೆ ಮಠದಲ್ಲಿದ್ದ ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇದರಲ್ಲಿ ರುದ್ರೇಶ ಎಂಬಾತನೇ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ. ರುದ್ರೇಶ್ ಬೆಳಗಾವಿ ಮೂಲದವನು ಎಂದು ತಿಳಿದು ಬಂದಿದೆ. ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.