ಗೃಹಲಕ್ಷ್ಮಿ ಹಣ ಕೊಡದಿದ್ದಕ್ಕೆ ಪತ್ನಿಯನ್ನು ವಿದ್ಯುತ್‌ ತಂತಿಗೆ ನೂಕಿ ಹತ್ಯೆ ಆರೋಪ

Public TV
1 Min Read
DAVANAGERE MURDER

ದಾವಣಗೆರೆ: ಗೃಹಲಕ್ಷ್ಮಿ (Gruha Lakshmi) ಯೋಜನೆಯ ಹಣವನ್ನು (Money) ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನೇ (Wife) ಕೊಲೆ ಮಾಡಿದ ಘಟನೆ ಜಗಳೂರು ತಾಲೂಕಿನ ಉಜ್ಜಪ್ಪರವಡೇರಹಳ್ಳಿಯಲ್ಲಿ ನಡೆದಿದೆ.

ಹತ್ಯೆಗೀಡಾದ ಮಹಿಳೆಯನ್ನು ಸತ್ಯಮ್ಮ (40) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಅಣ್ಣಪ್ಪ ಎಂದು ಗುರುತಿಸಲಾಗಿದೆ. ನೆಲಕ್ಕೆ ತಾಗುವಂತಿದ್ದ ವಿದ್ಯುತ್ ತಂತಿಯತ್ತ ಸತ್ಯಮ್ಮಳನ್ನು ನೂಕಿ ಆರೋಪಿ ಕೊಲೆ ಮಾಡಿದ್ದಾನೆ ಎಂದು ಮೃತಳ ಸಹೋದರ ಸತೀಶ್ ಎಂಬವರು ಆರೋಪಿಸಿದ್ದಾರೆ.

ಕೆಲಸ ಇಲ್ಲದೇ ಹಣಕ್ಕೆ ಪರದಾಡುತ್ತಿದ್ದ ಅಣ್ಣಪ್ಪ ಗೃಹಲಕ್ಷ್ಮಿ ಹಣ ಕೊಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಹಣ ತರಲು ಮಗನೊಂದಿಗೆ ಬ್ಯಾಂಕ್‌ಗೆ ಹೋದ ಸತ್ಯಮ್ಮನನ್ನು ಹಿಂಬಾಲಿಸಿದ್ದ ಅಣ್ಣಪ್ಪ, ಹಣಕ್ಕಾಗಿ ಪತ್ನಿ ಜತೆ ಜಗಳವಾಡಿ, ಹಲ್ಲೆ ಮಾಡಿದ್ದ. ಬಳಿಕ ಪತ್ನಿಯನ್ನು ಊರಿಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಉಜ್ಜಪ್ಪರವಡೇರಹಳ್ಳಿ ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್‌ನಿಂದ ಇಳಿಸಿ ಹಲ್ಲೆ ನಡೆಸಿ ಕೊಲೆ‌‌ ಮಾಡಿದ್ದಾನೆ. ಅಲ್ಲದೆ ಕರೆಂಟ್ ಶಾಕ್ ಹೊಡೆದಿದೆ ಎಂದು ಕಥೆ ಕಟ್ಟಿದ್ದ.

ಮೃತದೇಹವನ್ನು ದಾವಣಗೆರೆ‌ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article