ಹೈದರಾಬಾದ್: ಇತ್ತೀಚಿಗೆ ಪೆಟ್ರೋಲ್, ಡೀಸೆಲ್ ಬೆಲೆ ಚಿನ್ನದ ದರದಂತೆ ದಿನೇ ದಿನೇ ಗಗನಕ್ಕೇರುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70 ರೂಪಾಯಿಗೂ ಅಧಿಕವಿದೆ. ಈ ಮಧ್ಯೆ ಹೈದರಾಬಾದ್ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬರು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಉಪಯೋಗಿಸಿ ಪೆಟ್ರೋಲ್ ತಯಾರಿಸಿ ಹುಬ್ಬೇರುವಂತೆ ಮಾಡಿದ್ದಾರೆ.
ಹೈದರಾಬಾದ್ ಮೂಲಕ ಪ್ರೊ.ಸತೀಶ್ ಕುಮಾರ್ ವೃತ್ತಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪ್ಲಾಸ್ಟಿಕ್ ಮೂಲಕ ಪೆಟ್ರೋಲ್ ತಯಾರಿಸಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಿಕೊಟ್ಟಿದ್ದಾರೆ. ಸತೀಶ್ ಕುಮಾರ್ ಹಲವು ವರ್ಷಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಂಪನಿಯನ್ನು ನಡೆಸುತ್ತಿದ್ದಾರೆ. ಇಲ್ಲಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ಮೂರು ಹಂತಗಳ ಪ್ರಕ್ರಿಯೆಸಿ ಪ್ಲಾಸ್ಟಿಕ್ ಅನ್ನು ಇಂಧನವಾಗಿ ಪರಿವರ್ತಿಸುತ್ತಿದ್ದಾರೆ. ಇದನ್ನು ಪೆಟ್ರೋಲ್ ಪ್ಯಾರೊಲಿಸಿಸ್ ಎಂದು ಕರೆಯಲಾಗುತ್ತದೆ.
ಈ ಪ್ರಕ್ರಿಯೆಯು ಪ್ಲಾಸ್ಟಿಕ್ ಅನ್ನು ತೈಲ, ಡೀಸೆಲ್, ಪೆಟ್ರೋಲ್ ಆಗಿ ಪರಿವರ್ತಿಸಿ ಬಳಕೆ ಮಾಡಲು ಉಪಯುಕ್ತವಾಗಿದೆ. ಸುಮಾರು 500 ಕೆ.ಜಿ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‍ನಿಂದ 400 ಲೀಟರ್ ಪೆಟ್ರೋಲ್ ಉತ್ಪಾದಿಸಬಹುದು. ಇದು ಸರಳ ವಿಧಾನವಾಗಿದ್ದು ಇದನ್ನು ತಯಾರಿಸಲು ನೀರಿನ ಅವಶ್ಯಕತೆ ಬೀಳುವುದಿಲ್ಲ. ಅಲ್ಲದೆ ಕೊಳಚೆ ನೀರನ್ನು ಕೂಡ ಇದು ಬಿಡುಗಡೆ ಮಾಡುವುದಿಲ್ಲ. ಇದರಿಂದ ವಾಯು ಮಾಲಿನ್ಯವೂ ಆಗುವುದಿಲ್ಲ ಎಂದು ಸತೀಶ್ ತಿಳಿಸಿದ್ದಾರೆ.
2016 ರಿಂದ ಸತೀಶ್ ಅವರು ಮರುಬಳಕೆ ಮಾಡಲಾಗದ 50 ಟನ್ ಪ್ಲಾಸ್ಟಿಕ್ ಅನ್ನು ಪೆಟ್ರೋಲ್ ಆಗಿ ಪರಿವರ್ತನೆ ಮಾಡಿದ್ದಾರೆ. ಸದ್ಯ ಪ್ರತಿ ದಿನ 200 ಕೆಜಿ ತ್ಯಾಜ್ಯ ಪ್ಲಾಸ್ಟಿಕ್‍ನಿಂದ 200 ಲೀಟರ್ ಪೆಟ್ರೋಲ್ ಉತ್ಪಾದಿಸುತ್ತಿದ್ದಾರೆ. ಅಲ್ಲದೆ ಇಲ್ಲಿ ಉತ್ಪಾದಿಸಲಾಗುವ ಪೆಟ್ರೋಲ್, ಡೀಸೆಲ್‍ನ್ನು ಸ್ಥಳೀಯರಿಗೆ ಪ್ರತಿ ಲೀಟರ್ ಗೆ 40ರಿಂದ 50 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಪರಿಸರವನ್ನು ಕಾಪಾಡುವುದು ಈ ಪ್ರಯೋಗದ ಮುಖ್ಯ ಉದ್ದೇಶವಾಗಿದೆ. ನಾವು ಇದರಿಂದ ವಾಣಿಜ್ಯ ಲಾಭವನ್ನು ಬಯಸುತ್ತಿಲ್ಲ ಬದಲಿಗೆ ಮುಂದೆ ಭವಿಷ್ಯದಲ್ಲಿ ಪರಿಸರ ಸ್ವಚ್ಛವಾಗಿರಬೇಕು ಎಂದು ಮಾಡುತ್ತಿದ್ದೇವೆ. ಈ ಬಗ್ಗೆ ಆಸಕ್ತಿ ಹೊಂದಿರುವ ಯಾವುದೇ ಕಂಪನಿಯೊಂದಿಗೆ ನಾವು ನಮ್ಮ ತಂತ್ರಜ್ಞಾನವನ್ನು ಹಂಚಿಕೊಳ್ಳಲು ಸಿದ್ಧರಿದ್ದೇವೆ ಎಂದು ಸತೀಶ್ ಹೇಳಿದ್ದಾರೆ.
ಸದ್ಯ ಈ ಪೆಟ್ರೋಲ್ ವಾಹನಗಳಿಗೆ ಸೂಕ್ತ ಎನ್ನುವ ಬಗ್ಗೆ ಪರೀಕ್ಷೆಗಳು ನಡೆಸಿಲ್ಲ. ಅಲ್ಲದೆ ಪಿವಿಸಿ (ಪಾಲಿವಿನೈಲ್ ಕ್ಲೋರೈಡ್) ಮತ್ತು ಪಿಇಟಿ (ಪಾಲಿಥಿಲೀನ್ ಟೆರೆಫ್ಥಲೇಟ್) ಪ್ಲಾಸ್ಟಿಕ್ ಬಿಟ್ಟು, ಉಳಿದೆಲ್ಲಾ ರೀತಿಯ ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‍ಗಳನ್ನು ಉಪಯೋಗಿಸಿ ಇಂಧನ ತಯಾರಿಸಬಹುದಾಗಿದೆ.