ಬೆಂಗಳೂರು: ಸಾರ್ವಜನಿಕ ಸಾರಿಗೆಯಲ್ಲಿ ಸ್ಮಾರ್ಟ್ ಫೋನಿನಿಂದ ಕಿರಿಕಿರಿ ಆಗುತ್ತಿರುವ ವಿಚಾರವಾಗಿ ಹೈ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
ವಕೀಲ ರಮೇಶ್ ನಾಯ್ಕ್ ಎಲ್ ಅವರು ಪಿಐಎಲ್ ಸಲ್ಲಿಸಿದ್ದು, ಇಂದು ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.
ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಳಾದ ರೈಲು, ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಗಳಲ್ಲಿ ಸ್ಮಾರ್ಟ್‍ಫೋನ್ ಗಳಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಕೆಲ ಪ್ರಯಾಣಿಕರು ಸ್ಮಾರ್ಟ್ ಫೋನ್ ಗಳಲ್ಲಿ ಓಪನ್ ಸ್ಪೀಕರ್ ಇಟ್ಟು ಏರು ಧ್ವನಿಯಲ್ಲಿ ಸಂಗೀತ ಕೇಳುತ್ತಾರೆ. ಇದರಿಂದ ಸಹ ಪ್ರಯಾಣಿಕರಿಗೆ ಹೆಚ್ಚಿನ ಕಿರಿಕಿರಿ ಉಂಟಾಗುತ್ತದೆ. ಹಾಡು ಕೇಳುವುದು, ವಿಡಿಯೋಗಳನ್ನು ಪ್ಲೇ ಮಾಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ನಿಯಮ ರೂಪಿಸುವಂತೆ ಸರ್ಕಾರ ಮತ್ತು ರೈಲ್ವೇ ಇಲಾಖೆಗೆ ಆದೇಶಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಹಿಳೆಯರಿಗೆ, ವಿಕಲಚೇತನರಿಗೆ, ಹಿರಿಯ ನಾಗರಿಕರಿಕರಿಗೆ ಆಸನ ಹಾಗೂ ಧೂಮಪಾನ ನಿಷೇಧಿಸಲಾಗಿದೆ ಎನ್ನುವ ಸೂಚನಾ ಫಲಕದಂತೆ ಈ ಸಮಸ್ಯೆ ನಿವಾರಿಸಲು ಬಸ್ ಹಾಗೂ ರೈಲಿನಲ್ಲಿ ಫಲಕವನ್ನು ಹಾಕಲು ಆದೇಶಿಸಬೇಕೆಂದು ರಮೇಶ್ ನಾಯ್ಕ್ ಮನವಿ ಮಾಡಿದ್ದಾರೆ.
ಅರ್ಜಿದಾರರ ವಾದವನ್ನು ಆಲಿಸಿದ ಬಳಿಕ ಹೈಕೋರ್ಟ್ ಭಾರತೀಯ ರೈಲ್ವೇ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.