ಚಿತ್ರದುರ್ಗ: ತಡೆಗೋಡೆ ಇಲ್ಲದ ದೊಡ್ಡಕೆರೆಗೆ ಕಾರು ಉರುಳಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಕೋಡಿರಂಗ ವನಹಳ್ಳಿಯಿಂದ ಭರಮಸಾಗರದ ಕಡೆಗೆ ಗುರುವಾರ ತಡರಾತ್ರಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ತುಮಕೂರು ನಿವಾಸಿ ಜಿ. ರಮೇಶ್ (40) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ
25 ವರ್ಷಗಳ ಬಳಿಕ ತುಂಬಿದ್ದ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದ ದೊಡ್ಡಕೆರೆ ಏರಿ ಮೇಲೆ ಬರುತ್ತಿದ್ದ ಕಾರು ಕೆರೆಗೆ ಪಲ್ಟಿಯಾಗಿ ದುರ್ಘಟನೆ ನಡೆದಿದೆ. ಇಂದು ಬೆಳಗಿನ ಜಾವ ಕೆರೆಯಲ್ಲಿ ನೀರಿನೊಳಗೆ ಕಾರಿನ ಹೆಡ್ ಲೈಟ್ ಉರಿಯುತ್ತಿದ್ದ ಬೆಳಕನ್ನು ನೋಡಿದ ಸಾರ್ವಜನಿಕರು ಅಚ್ಚರಿಯಾಗಿ ಹಗ್ಗ ಹಾಗೂ ಜೆಸಿಬಿ ಸಹಾಯದಿಂದ ಕಾರನ್ನು ಹೊರ ತೆಗೆದಿದ್ದಾರೆ. ಇದನ್ನೂ ಓದಿ ಹಿಂದಿನ ಸರ್ಕಾರವೇ ರೈತರ ಆತ್ಮಹತ್ಯೆಗೆ ಕಾರಣ – ಯೋಗಿ ಆದಿತ್ಯನಾಥ್
ಕಾರನ್ನು ಹೊರ ತೆಗೆದ ಬಳಿಕ ಕಾರಲ್ಲೇ ವ್ಯಕ್ತಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಕೆರೆಯ ಬದಿಯಲ್ಲಿ ತಡೆಗೋಡೆ ಹಾಗೂ ವಿದ್ಯುತ್ ದೀಪ ಇಲ್ಲದ ಹಿನ್ನೆಲೆ ಈ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. ಈ ಸಂಬಂಧ ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.