ಗುರಗಾಂವ್: ಆಸ್ಪತ್ರೆ ಬೆಡ್ ನಿಂದ ಬಿದ್ದು 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ಗುರಗಾಂವ್ ನಲ್ಲಿ ನಡೆದಿದೆ.
ಮೃತ ದುರ್ದೈವಿ ವ್ಯಕ್ತಿಯನ್ನು ರಾಮ್ ಪಾಲ್ ಎಂದು ಗುರುತಿಸಲಾಗಿದ್ದು, ಘಟನೆ ಗುರುವಾರ ನಡೆದಿದೆ. ಈ ಸಂಬಂಧ ಮೃತರ ಕುಟುಂಬಸ್ಥರು ಶನಿವಾರ ಕೇಸ್ ದಾಖಲಿಸಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ರಾಮ್ ಪಾಲ್ ಮೃತಪಟ್ಟಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಏನಿದು ಘಟನೆ?: ತೀವ್ರ ಜ್ವರದಿಂದ ಬಳಲುತ್ತಿದ್ದ ರಾಮ್ ಪಾಲ್ ಅವರನ್ನು ಸ್ಥಳೀಯ ಮೆಟ್ರೋ ಆಸ್ಪತ್ರೆಗೆ ದಾಖಲಿಸಿದ್ದೆವು ಎಂದು ಮಗ ಸುಕೇಂದ್ರ ಕುಮಾರ್ ತಿಳಿಸಿದ್ದಾರೆ. ತಂದೆಯವರನ್ನು ವೈದ್ಯರು ಎಮೆರ್ಜೆನ್ಸಿ ವಾರ್ಡ್ ಗೆ ದಾಖಲಿಸಿ, ಹೊರಗಡೆ ನಿಲ್ಲುವಂತೆ ಹೇಳಿದ್ದರು. ಅವರ ಕುಟುಂಬಸ್ಥನಾಗಿ ನಾನೊಬ್ಬನೇ ಇಲ್ಲಿರುವುದು ಎಂದು ಹೇಳಿದ್ರೂ ಕೇಳಲಿಲ್ಲ. ಆ ನಂತರ ಮೂರು ಗಂಟೆಗಳ ಬಳಿಕ ತಂದೆಯ ಸ್ಥಿತಿ ಚಿಂತಾಜನಕವಾಗಿದೆ. ಹೀಗಾಗಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ದೇವೆ ಅಂದ್ರು. ನನ್ನ ಬಾವ ಸಂದೀಪ್ ಹಾಗೂ ನಾನು ಐಸಿಯು ಒಳಗಡೆ ತಂದೆಯನ್ನು ನೋಡಲು ಹೋದೆವು. ಈ ವೇಳೆ ತಂದೆ ಬೆಡ್ ಮೇಲೆ ಮಲಗಿದ್ರು. ಅವರ ತಲೆಗೆ ಗಾಯಗಳಾಗಿತ್ತು ಹಾಗೂ ಅವರು ಹಾಕಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳಾಗಿತ್ತು ಅಂತ ಸುಕೇಂದ್ರ ವಿವರಿಸಿದ್ದಾರೆ.
ಗಾಯಗಳ ಬಗ್ಗೆ ವಿಚಾರಿಸಿದಾಗ ವೈದ್ಯರು ಸಮರ್ಪಕ ಉತ್ತರ ನೀಡಲಿಲ್ಲ, ಅವರು ವೆಂಟಿಲೇಟರ್‍ನಲ್ಲಿದ್ದಾರೆ ಎಂದು ಹೇಳಿದ್ರು. ನಮ್ಮ ತಂದೆಯಲ್ಲಿ ಯಾವುದೇ ಚಲನೆಯಿರಲಿಲ್ಲ. ವೈದ್ಯರು ನಮ್ಮೊಂದಿಗೆ ಒರಟಾಗಿ ವರ್ತಿಸಿದ್ರು. ಚಿಕಿತ್ಸೆ ನಡೆಯುತ್ತಿದೆ ಎಂದಷ್ಟೇ ಹೇಳಿದ್ರು ಅಂತ ಕುಮಾರ್ ಹೇಳಿದ್ದಾರೆ.
ಘಟನೆಯ ಬಳಿಕ ಮೃತ ರಾಮ್ ಪಾಲ್ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿ ಪ್ರತಿಭಟನೆ ಮಾಡಿದ್ದಾರೆ. ಆಸ್ಪತ್ರೆಯ ವೈದ್ಯಕೀಯ ಮೇಲ್ವೀಚಾರಕ ಹಾಗೂ ಜಿಐ ಸರ್ಜನ್ ಡಾ. ಅನೂಪ್ ಸಿನ್ಹಾ ಈ ಬಗ್ಗೆ ಪ್ರತಿಕ್ರಿಯಿಸಿ, ರೋಗಿಗೆ ಹಿಮೋಗ್ಲೋಬಿನ್ ಹಾಗೂ ಪ್ಲೇಟ್ ಲೆಟ್ ಗಳು ಕಡಿಮೆಯಾಗುತ್ತಾ ಬರುತ್ತಿತ್ತು. ರೋಗಿಯನ್ನು ನೋಡಿಕೊಳ್ಳಲೆಂದು ಇಬ್ಬರು ನರ್ಸ್ ಗಳು ಕೂಡ ಒಳಗಿದ್ದರು. ಅವರಿಗೆ ಪಾಶ್ರ್ವವಾಯು ಉಂಟಾಗಿರಬಹುದು. ಇದರಿಂದ ಮಂಚದ ರಾಡ್ ಗೆ ಅವರ ತಲೆ ತಾಗಿರುವ ಸಾಧ್ಯತೆಯಿದೆ ಅಂತ ಹೇಳಿದ್ದಾರೆ.
ಈ ಕುರಿತು ಸಂದೀಪ್ ಮಾತನಾಡಿ, ಆಸ್ಪತ್ರೆಯ ಒಳಗಡೆ ಏನು ನಡೆದಿದೆ ಅಂತ ನಮಗೆ ತಿಳಿದಿಲ್ಲ. ಅಚಾನಕ್ ಆಗಿ ಅವರು ಬೆಡ್ ನಿಂದ ಬಿದ್ದಿದ್ದಾರೆ ಅಂತ ವೈದ್ಯರು ಹೇಳುತ್ತಿದ್ದಾರೆ. ಆದ್ರೆ ಪಾಲ್ ಅವರನ್ನು ಸ್ಟ್ರೆಚರ್ ನಿಂದ ಬೆಡ್‍ಗೆ ಬದಲಾಯಿಸುವಾಗ ಕೆಳಗೆ ಬಿದ್ದು ಗಾಯಗಳಾಗಿರಬಹುದು ಎಂಬ ಅನುಮಾನವಿದೆ ಅಂತ ಹೇಳಿದ್ದಾರೆ.
ಘಟನೆ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಐಪಿಸಿ ಸೆಕ್ಷನ್ 304ಆ(ನಿರ್ಲಕ್ಷ್ಯದಿಂದ ಸಾವು) ಹಾಗೂ 34 (ಪಿತೂರಿ) ಅಡಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಗುರುಗಾಂವ್ ಪೊಲೀಸರು ತಿಳಿಸಿದ್ದಾರೆ.