ಚಿಕ್ಕಬಳ್ಳಾಪುರ: ‘ನನ್ನ ಪತ್ನಿ ಜೊತೆ ಮಾತನಾಡಬೇಡ’ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೆಟ್‌ನಿಂದ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಬಾಗೇಪಲ್ಲಿ ತಾಲೂಕಿನ ಆದಿಗಾನಹಳ್ಳಿ ಬಳಿ ನಡೆದಿದೆ.
ಶ್ರೀನಿವಾಸ್(38) ಕೊಲೆಯಾದ ವ್ಯಕ್ತಿ. ಈತನನ್ನು ಇಬ್ಬರು ಸಂಬಂಧಿಗಳೇ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನವೀನ್ ಹಾಗೂ ವೆಂಕಟರಾಮು ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಡಿಸೆಂಬರ್ ಒಳಗಾಗಿ ಮಹದಾಯಿ ಯೋಜನೆಗೆ ಚಾಲನೆ ಸಿಗಲಿದೆ: ಕಾರಜೋಳ
ಹಿನ್ನೆಲೆ ಏನು?
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಆದಿಗಾನಹಳ್ಳಿ ಗ್ರಾಮ ಶ್ರೀನಿವಾಸ್, ಆಗಸ್ಟ್ 3 ರಂದು ಬೆಳಗ್ಗೆ ಗ್ರಾಮ ಹೊರಹೊಲಯದಲ್ಲಿ ಹತ್ಯೆಯಾಗಿದ್ದ. ಈ ಹಿನ್ನೆಲೆ ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ. ಈಗ ಕೊಲೆಯ ರಹಸ್ಯ ಬಯಲಾಗಿದೆ. ಸ್ವತಃ ಶ್ರೀನಿವಾಸ್‍ನ ಸಹೋದರ ಸಂಬಂಧಿ ನವೀನ್ ಹಾಗೂ ಶ್ರೀನಿವಾಸ್‍ನ ಅಕ್ಕನ ಮಗ ವೆಂಕಟರಾಮುನೇ ಕೊಲೆ ಮಾಡಿದ್ದಾರೆ ಎಂಬ ಆಘಾತಕಾರಿ ವಿಷಯ ಬಯಲಾಗಿದೆ.
ಅನೈತಿಕ ಸಂಬಂಧದ ಸಂಶಯ
ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೃತನ ತಾಯಿ ಗಂಗಮ್ಮ ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿ, ನನ್ನ ಸೊಸೆಗೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ನನ್ನ ಮಗ ಶ್ರೀನಿವಾಸ್ ತನ್ನ ಪತ್ನಿ ಅಶ್ವಿನಿಯ ಮೇಲೆ ಅನುಮಾನ ಪಟ್ಟು, ಆಕೆಯ ಜೊತೆ ಸಲುಗೆಯಿಂದ ಇದ್ದ ನವೀನ್‍ಗೆ ಬೈಯ್ದು ಬುದ್ಧಿವಾದ ಹೇಳಿದ್ದ. ಅದೇ ಈ ಕೊಲೆಗೆ ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಇದ್ರಿಂದ ಎಚ್ಚೆತ್ತ ಪೆÇಲೀಸರು, ಆದಿಗಾನಹಳ್ಳಿ ಗ್ರಾಮದ ನವೀನ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಶ್ರೀನಿವಾಸ್‍ನ ಅಕ್ಕನ ಮಗ ವೆಂಕಟರಾಮ ಕೆಲಸ ಕಾರ್ಯಗಳಿಗೆ ಹೋಗದೆ ಮನೆಯಲ್ಲಿ ಇರುವ ಕಾರಣ ಆತನಿಗೂ ಶ್ರೀನಿವಾಸ್ ಬುದ್ಧಿ ಹೇಳಿದ್ದ. ಇದ್ರಿಂದ ಇಬ್ಬರು ಸೇರಿ ಕೆಲಸಕ್ಕೆ ಹೊಗ್ತಿದ್ದ ಶ್ರೀನಿವಾಸ್‍ನನ್ನು ಅಡ್ಡಗಟ್ಟಿ, ಕ್ರಿಕೆಟ್ ಬ್ಯಾಟ್ ಹಾಗೂ ವಿಕೆಟ್‍ಗಳಿಂದ ತಲೆಗೆ ಹೊಡೆದು ಹತ್ಯೆ ಮಾಡಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಪೈಪ್‍ಲೈನ್ ಅಡುಗೆ ಅನಿಲದ ಬೆಲೆ ಪ್ರತಿ ಯೂನಿಟ್‍ಗೆ 2.63 ರೂ. ಏರಿಕೆ
ಪತ್ನಿ ಕೈವಾಡ
ಶ್ರೀನಿವಾಸ್ ಕೊಲೆ ಪ್ರಕರಣದಲ್ಲಿ ಆತನ ಪತ್ನಿ ಅಶ್ವಿನಿಯ ಕೈವಾಡದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದು, ಸದ್ಯ ಯಾವುದೇ ಸಾಕ್ಷ್ಯಾಧರಗಳು ಲಭ್ಯವಾಗಿಲ್ಲ. ಇದ್ರಿಂದ ಆರೋಪಿಗಳಾದ ನವೀನ್ ಹಾಗೂ ವೆಂಕಟರಾಮುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.