ಹೈದರಾಬಾದ್: ಸಂಸಾರ ನಿಭಾಯಿಸೋಕೆ ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ದಂಪತಿಯನ್ನು ಭಾನುವಾರದಂದು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸ್ ಹಾಗೂ ರೇಣುಕಾ ಬಂಧಿತ ಆರೋಪಿಗಳು. ಶ್ರೀನಿವಾಸ್‍ಗೆ ಈ ಹಿಂದೆಯೇ ಮದುವೆಯಾಗಿದ್ದು, ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಆದ್ರೆ ಎರಡನೇ ಮದುವೆಯಾದ ನಂತರ ಸರಿಯಾಗಿ ಕೆಲಸ ಮಾಡದ ಕಾರಣ ಕೆಲಸ ಕಳೆದುಕೊಂಡಿದ್ದ. ನಂತರ ಜೀವನೋಪಾಯಕ್ಕಾಗಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದ. ಆದ್ರೆ ಎರಡು ಸಂಸಾರ ನಿಭಾಯಿಸಬೇಕಿದ್ದರಿಂದ ಕೂಲಿಯಿಂದ ಬರುತ್ತಿದ್ದ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಶ್ರೀನಿವಾಸ್ ಎರಡನೇ ಹೆಂಡ್ತಿ ರೇಣುಕಾ ಜೊತೆಗೂಡಿ ಕಳ್ಳತನ ಮಾಡಲು ಶುರು ಮಾಡಿದ. ಮನೆ ಬಾಡಿಗೆಗೆ ಇದೆ ಎಂದು ಎಲ್ಲಿ ಬೋರ್ಡ್ ಹಾಕಿರ್ತಾರೋ ಆ ಪ್ರದೇಶದಲ್ಲಿ ಈ ದಂಪತಿ ಕಳ್ಳತನ ಮಾಡ್ತಿದ್ರು.
Advertisement
ಶ್ರೀನಿವಾಸ್ ತನ್ನ ಕೈನೆಟಿಕ್ ಹೋಂಡಾದಲ್ಲಿ ಸುತ್ತಾಡಿ ಮನೆ ಖಾಲಿಯಿದೆ ಎಂಬ ಬೋರ್ಡ್ ಗಾಗಿ ಹುಡುಕುತ್ತಿದ್ದ. ಮನೆ ಸಿಕ್ಕಿದ ನಂತರ ಹೆಂಡತಿ ರೇಣುಕಾ ಜೊತೆ ಹೋಗಿ ಮನೆಯ ಮಾಲೀಕರನ್ನ ಸಂಪರ್ಕಿಸುತ್ತಿದ್ದ. ಅವರೊಂದಿಗೆ ಮಾತನಾಡೋ ವೇಳೆ ಅದೇ ಪ್ರದೇಶದಲ್ಲಿ ಆಗ ತಾನೇ ಲಾಕ್ ಮಾಡಲಾಗುತ್ತಿದ್ದ ಮನೆಯನ್ನ ಪತ್ತೆ ಮಾಡ್ತಿದ್ರು. ನಾವು ಮತ್ತೆ ಬರ್ತೀವಿ ಅಂತ ಮನೆಯ ಮಾಲೀಕರಿಗೆ ಹೇಳಿ ಲಾಕ್ ಆಗಿರೋ ಮನೆಗೆ ಹೋಗಿ ಬೀಗ ಮುರಿದು ಕಳ್ಳತನ ಮಾಡ್ತಿದ್ರು. ಈ ಕಿಲಾಡಿ ದಂಪತಿ ಇಲ್ಲಿನ ಜುಬಿಲಿ ಹಿಲ್ಸ್, ಲಾಲಗುಡ ಹಾಗೂ ಮಲ್ಕಜ್‍ಗಿರಿಯಲ್ಲಿ ಇದೇ ರೀತಿಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಡಿಸಿಪಿ ಬಿ. ಲಿಂಬಾ ರೆಡ್ಡಿ ಹೇಳಿದ್ದಾರೆ.
Advertisement
ಲಾಲಗುಡದಲ್ಲಿ 10 ದಿನಗಳ ಹಿಂದೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುವ ಸಂದರ್ಭದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಲಾಲಗುಡದ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಇತರೆ ಪ್ರದೇಶಗಳ ಸುಮಾರು 100 ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲನೆ ನಡೆಸಿದ ನಂತರ ವಾಹನ ನೋಂದಣಿ ಸಂಖ್ಯೆಯ ಮೂಲಕ ಆರೋಪಿಗಳನ್ನ ಪತ್ತೆಹಚ್ಚಿದ್ದಾರೆ.
Advertisement
ಆರೋಪಿಗಳಿಂದ ಪೊಲೀಸರು ಸುಮಾರು 100 ಗ್ರಾಂ ಚಿನ್ನ, 200 ಗ್ರಾಂ ಬೆಳ್ಳಿ ಹಾಗೂ ಮೊಬೈಲ್‍ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನ ಲಾಲಗುಡ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು ತನಿಖೆ ಮುಂದುವರೆದಿದೆ.