– ಪಕ್ಕದ್ಮನೆಯವರಿಂದ 5 ದಿನದ ನಂತ್ರ ಬೆಳಕಿಗೆ
ಕೊಡಗು: ಕಣ್ಣೆದುರೇ ಮಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾದರೂ ಮಾನಸಿಕ ಅಸ್ವಸ್ಥ ತಾಯಿಯ ಗಮನಕ್ಕೆ ಬಾರದ ದಾರುಣ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೋಪ್ಪ ಗ್ರಾಮದಲ್ಲಿ ನಡೆದಿದೆ.
ಐದು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗೌತಮ್ (30) ಆತ್ಮಹತ್ಯೆಗೆ ಶರಣಾದ ಖಾಸಗಿ ಬಸ್ ಚಾಲಕ. ಈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ನೆರೆಮನೆಯವರ ಪ್ರಯತ್ನದಿಂದಾಗಿ ಐದು ದಿನ ಕಳೆದ ನಂತರ ಗೊತ್ತಾಗಿದೆ.
ಕಾಫಿ ಬೋರ್ಡ್ ನಿವಾಸಿ ಗೌತಮ್ ಅವಿವಾಹಿತನಾಗಿದ್ದು, ತಾಯಿಯೊಂದಿಗೆ ವಾಸಿಸುತ್ತಿದ್ದನು. ಸಹೋದರಿಯರು ವಿವಾಹವಾಗಿ ಟಿ. ಶೆಟ್ಟಿಗೇರಿಯಲ್ಲಿ ನೆಲೆಸಿದ್ದಾರೆ. ಏ.14 ರಂದು ಸಂಜೆಯ ವೇಳೆ ಗೌತಮ್ ಎಲ್ಲರಿಗೆ ಕಾಣಿಸಿದ್ದಾನೆ. ನಂತರ ಯಾರ ಕಣ್ಣಿಗೂ ಬಿದ್ದಿರಲಿಲ್ಲ.
ವಿಷು ಹಬ್ಬಕ್ಕೆಂದು ನೆಂಟರ ಮನೆಗೆ ಹೋಗಿದ್ದ ಪಕ್ಕದ ಮನೆಯವರು ಶುಕ್ರವಾರ ಬೆಳಿಗ್ಗೆ ಹಿಂತಿರುಗಿ ಬಂದಿದ್ದಾರೆ. ಗೌತಮ್ ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಮನೆಯೊಳಗೆ ಪ್ರವೇಶಿಸಿದಾಗ ಮುಂಬಾಗಿಲಿನ ಬಳಿ ವಿಷ ಸೇವಿಸಿದ ಗೌತಮ್ ಮೃತದೇಹ ಕಂಡುಬಂದಿದೆ. ಗೌತಮ್ ಏ.14ರಂದು ಸಂಜೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಗೌತಮ್ ತಾಯಿ ಮಾನಸಿಕ ಅಸ್ವಸ್ಥರಾಗಿರುವ ಕಾರಣ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಅರಿವಿಗೆ ಬರಲಿಲ್ಲ. ಹೀಗಾಗಿ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ಗೌತಮ್ ತಾತ್ಕಾಲಿಕ ಚಾಲಕನಾಗಿ ಖಾಸಗಿ ಬಸ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಸದ್ಯಕ್ಕೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.