ಲಕ್ನೋ: 30 ವರ್ಷದ ವ್ಯಕ್ತಿಯೊಬ್ಬ ಮೂವರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ಗುರುವಾರ ಈ ಘಟನೆ ನಡೆದಿದ್ದು, ನಿಬಿಯಾ(9), ಅದ್ವಿತಾ (7) ಮತ್ತು ರಿಯಾ (5) ಮೃತ ಮಕ್ಕಳು. ನಯೇ ಸಡಕ್ ಪ್ರದೇಶದ ನಿವಾಸಿಯಾಗಿದ್ದ ದೀಪಕ್ ಗುಪ್ತಾ(30) ಆರ್ಥಿಕ ಸಮಸ್ಯೆಯಿಂದ ಬೇಸತ್ತಿದ್ದ ಮಕ್ಕಳನ್ನು ಕೊಂದು, ಬಳಿಕ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಮಕ್ಕಳು ಅಪ್ರಾಪ್ತರಾಗಿದ್ದು, ಅವರಿಗೆ ವಿಷ ಬೆರೆಸಿದ ಪಾನೀಯ ಕುಡಿಸಿದ್ದಾನೆ. ಬಳಿಕ ತಾನೂ ವಿಷ ಕುಡಿದಿದ್ದಾನೆ. ವಿಚಾರ ತಿಳಿದ ನಂತರ ನಾಲ್ವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ನಾಲ್ವರು ಮೃತಪಟ್ಟಿದ್ದಾರೆ.
ಸದ್ಯಕ್ಕೆ ಮಾಹಿತಿ ತಿಳಿದು ಪೊಲೀಸರು ಆಸ್ಪತ್ರೆಗೆ ಬಂದು ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.