ರಾಯ್ಪುರ: ಮೂಢನಂಬಿಕೆಗೆ ಮಾರು ಹೋದ 33 ವರ್ಷದ ಯುವಕನೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿದ ದೇವರಿಗೆ ಅರ್ಪಿಸಿದ ವಿಚಿತ್ರ ಘಟನೆ ಛತ್ತೀಸ್‌ಗಢದ ದುರ್ಗ್ (Chhattisgarh’s Durg) ಜಿಲ್ಲೆಯಲ್ಲಿ ನಡೆದಿದೆ.
ಅಂಜೋರಾ ಪೊಲೀಸ್ ಚೌಕಿ ವ್ಯಾಪ್ತಿಯ ತಾನಾಡು ಗ್ರಾಮದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕ, ಸಹೋದರನ ಬರ್ಬರ ಹತ್ಯೆ – ಯುವತಿ ತಂದೆಯಿಂದಲೇ ಡಬಲ್ ಮರ್ಡರ್!
ಮಾಹಿತಿಗಳ ಪ್ರಕಾರ, ರಾಜೇಶ್ವರ್ ನಿಶಾದ್ ಗ್ರಾಮದ ಕೆರೆಗೆ ತೆರಳಿ ಕೆಲ ಮಂತ್ರಗಳನ್ನು ಪಠಿಸಿ ಬಳಿಕ ಚಾಕುವಿನಿಂದ ನಾಲಿಗೆಯನ್ನು ಕೊಯ್ದು ದಡದಲ್ಲಿರುವ ಕಲ್ಲಿನ ಮೇಲೆ ಇಟ್ಟಿದ್ದಾನೆ. ಇತ್ತ ದೇವಸ್ಥಾನದಲ್ಲಿ ರಕ್ತಸ್ರಾವವಾಗುತ್ತಿದ್ದುದನ್ನು ಕಂಡ ಗ್ರಾಮಸ್ಥರು ಕೂಡಲೇ ಅಂಬುಲೆನ್ಸ್‌ಗೆ ಕರೆ ಮಾಡಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ.
ಗ್ರಾಮಸ್ಥರ ಪ್ರಕಾರ, ನಿಶಾದ್ ಅವರ ಪತ್ನಿ ಮೂಕಿಯಾಗಿದ್ದಾರೆ. ಹೀಗಾಗಿ ನನ್ನ ಕೆಲವೊಂದು ಆಸೆಗಳನ್ನು ಪೂರೈಸಲು ಶಿವನಿಗೆ ತನ್ನ ನಾಲಿಗೆಯನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಿಶಾದ್ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಘಟನೆಯು ಮೂಢನಂಬಿಕೆಯ ಪ್ರಕರಣವೆಂದು ತೋರುತ್ತದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.