ಬೆಂಗಳೂರು: ತಿಮ್ಮಪ್ಪನ ಹೆಸರಿನಲ್ಲಿ ಭಕ್ತರಿಗೆ ಮಹಾಮೋಸ ಮಾಡಿರುವ ಖದೀಮನನ್ನು ಭಕ್ತರೇ ಹಿಡಿದು ಬಸವನಗುಡಿ ಪೊಲೀಸ್ ಠಾಣೆಗೆ ಹಿಡಿದುಕೊಟ್ಟಿದ್ದಾರೆ.
ಮೋಸ ಮಾಡಿ ತಲೆಮರಿಸಿಕೊಂಡಿದ್ದ ಆರೋಪಿ ರಾಘವೇಂದ್ರ ಬೆಂಗಳೂರಿಗೆ ಬಂದು ಬೇರೆಯವರಿಗೆ ಮಕ್ಮಲ್ ಟೋಪಿ ಹಾಕಲು ಮುಂದಾಗಿದ್ದನು. ಈ ಹಿಂದೆ ಮೋಸ ಹೋಗಿದ್ದ ಭಕ್ತರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ರಾಘವೇಂದ್ರ ಮೂಲತಃ ಆಂಧ್ರ ಪ್ರದೇಶದವನಾಗಿದ್ದು, ತಿರುಪತಿಗೆ ಹೋಗುವ ಭಕ್ತಾದಿಗಳನ್ನು ಟಾರ್ಗೆಟ್ ಮಾಡಿ ಹಲವು ಅಮೀಷಗಳನೊಡ್ಡಿ ಹಣ ಪಡೆದು ಮೋಸ ಮಾಡುತ್ತಿದ್ದನು.
Advertisement
Advertisement
ಆರೋಪಿ ರಾಘವೇಂದ್ರ ಮೊದಲು ಭಕ್ತಾದಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಬಳಿಕ ನಾನು ತಿಮ್ಮಪ್ಪನ ಆಡಳಿತ ಮಂಡಳಿಯಲ್ಲಿ ಸದಸ್ಯ ಆಗಿದ್ದೇನೆ. ನಿಮಗೆ ನೇರವಾಗಿ ಸ್ವಾಮಿಯ ಪಾದಕ್ಕೆ ಕರೆದುಕೊಂಡು ಹೋಗಿ ದರ್ಶನ ಕೊಡಿಸುತ್ತೇನೆ. ಅಷ್ಟೇ ಅಲ್ಲದೆ ತಿರುಪತಿಯಲ್ಲಿ ನಿಮಗೆ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ಭಕ್ತಾದಿಗಳಿಗೆ ನಂಬಿಸುತ್ತಿದ್ದನು.
Advertisement
Advertisement
ವಿಶೇಷ ಎಂದರೆ ಬ್ರಾಹ್ಮಣ ಭಕ್ತಾದಿಗಳನ್ನು ಬಲೆಗೆ ಬೀಳಿಸಿಕೊಂಡು ಹಣ ಪಡೆದುಕೊಳ್ಳುತ್ತಿದ್ದನು. ಭಕ್ತರು ಹಣ ಕೊಟ್ಟ ಬಳಿಕ ತಿರುಪತಿಗೆ ಬರುವುದಕ್ಕೆ ದಿನಾಂಕ ನಿಗದಿ ಮಾಡಿ ಕರೆಸಿಕೊಳ್ಳುತ್ತಿದ್ದನು. ತಿರುಪತಿಗೆ ಬರುವ ತನಕ ಭಕ್ತಾದಿಗಳಿಗೆ ಸಂಪರ್ಕಕ್ಕೆ ಸಿಗುತ್ತಿದ್ದನು. ತಿರುಪತಿ ತಲುಪಿದ್ದೀವಿ ಎಂದು ಆರೋಪಿ ರಾಘವೇಂದ್ರನಿಗೆ ಭಕ್ತರು ವಿಷಯ ಮುಟ್ಟಿಸುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಯಾಮಾರಿಸುತ್ತಿದ್ದನು.
ಆರೋಪಿ ರಾಘವೇಂದ್ರನಿಗೆ ನಂಬಿ ತಿರುಪತಿಗೆ ಹೋಗುತ್ತಿದ್ದ ಭಕ್ತರು ಬರಿಗೈಯಲ್ಲಿ ಮನೆ ಬರುತ್ತಿದ್ದರು. ಸದ್ಯ ಆರೋಪಿ ರಾಘವೇಂದ್ರನ ವಿರುದ್ಧ ಬಸವನಗುಡಿಯಲ್ಲಿ ದೂರು ದಾಖಲಾಗಿದೆ.