ಮುಂಬೈ: ನಾನು ನಿನ್ನ ತಂದೆಯ ಕ್ಲೋಸ್ ಫ್ರೆಂಡ್ ಎಂದು ಹೇಳಿ ಶಾಲೆಯ ವಾಶ್ ರೂಂನಲ್ಲಿಯೇ 11 ವರ್ಷದ ಬಾಲಕಿಯ ಅತ್ಯಾಚಾರ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಮಂಗೇಶ್ ಪದಮುಲು(40) ಎಂದು ಗುರುತಿಸಲಾಗಿದೆ. ಘಟನೆ ನಡೆದ 10 ಗಂಟೆಗಳೊಳಗೆ ಆರೋಪಿಯನ್ನು ಪುಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಲೆಯಲ್ಲಿ ಗುರುವಾರ ಮಧ್ಯಾಹ್ನದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಬಾಲಕಿ ತನ್ನ ಹೆತ್ತವರ ಮುಂದೆ ಹೇಳಿಕೊಂಡಿದ್ದಾಳೆ. ಕೂಡಲೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಯುವತಿಯ ಮೇಲೆ ಗ್ಯಾಂಗ್ ರೇಪ್ – ಇಬ್ಬರು ಅಪ್ರಾಪ್ತರು, ನಾಲ್ವರು ಅರೆಸ್ಟ್
ಇತ್ತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ 5 ತಂಡಗಳನ್ನು ರಚಿಸಿದ್ದಾರೆ. ಅಲ್ಲದೆ ಆರೋಪಿ ಪತ್ತೆಗೆ ಬಲೆ ಬೀಸಿದರು. ಈ ವೇಳೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಅಪರಿಚಿತ ವ್ಯಕ್ತಿ ಬಾಲಕಿಯನ್ನು ಪ್ರಶ್ನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಂತೆಯೇ ಆತನ ಸ್ಕೆಚ್ ಮಾಡಿ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯಲು ಎಲ್ಲಾ ಪ್ರಯತ್ನಗಳನ್ನು ನಡೆಸಿ ಕೊನೆಗೆ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿ ಶಾಲೆಯಲ್ಲಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ವ್ಯಕ್ತಿ ಆಕೆಯನ್ನು ಮೂಲೆಯೊಂದಕ್ಕೆ ತಳ್ಳಿದ್ದಾನೆ. ನಂತರ ನಾನು ನಿನ್ನ ತಂದೆಯ ಕ್ಲೋಸ್ ಫ್ರೆಂಡ್ ಎಂದು ಹೇಳಿದ್ದಾನೆ. ಅಲ್ಲದೆ ಆಕೆಯನ್ನು ಶಾಲೆಯ ಶೌಚಾಲಯಕ್ಕೆ ತಳ್ಳಿ ತನ್ನ ಕಾಮ ತೃಷೆ ತೀರಿಸಿಕೊಂಡಿದ್ದಾನೆ. ಇದನ್ನೂ ಓದಿ: ಶಾಲೆಯಿಂದ ಗೇಟ್ ಪಾಸ್ – 10ನೇ ಕ್ಲಾಸ್ ಟಾಪರ್ ಆತ್ಮಹತ್ಯೆ
ಅತ್ಯಾಚಾರಕ್ಕೂ ಮುನ್ನ ಬಾಲಕಿ ಸಹಾಯಕ್ಕಾಗಿ ಕಿರುಚಾಡಿದ್ದಾಳೆ. ಈ ವೇಳೆ ಆರೋಪಿ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಬಾಲಕಿ ತನ್ನ ಗೆಳತಿಯರ ಜೊತೆ ಈ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಮನೆಗೆ ಬಂದ ಬಳಿಕ ಹೆತ್ತವರ ಬಳಿ ನಡೆದ ಘಟನೆಯನ್ನು ವಿವರಿಸಿದ್ದು, ಅದರಂತೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ.