ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ (Telangana) ಮೂಲದ ಆರೋಪಿ ಒಬ್ಬನನ್ನು ಮಹಾರಾಷ್ಟ್ರ ಪೊಲೀಸರು (Police) ಬಂಧಿಸಿದ್ದಾರೆ.
ಆರೋಪಿಯನ್ನು ಗಣೇಶ್ ರಮೇಶ್ ವನಪರ್ಡಿ (19) ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನನ್ನು ವಿಚಾರಣೆಗಾಗಿ ನ.8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇ-ಮೇಲ್ ಐಡಿ ಶಾದಾಬ್ ಖಾನ್ ಎಂಬ ವ್ಯಕ್ತಿಗೆ ಸೇರಿದ್ದು, ಬೆಲ್ಜಿಯಂನಿಂದ ಇ-ಮೇಲ್ ಸಂದೇಶಗಳು ಬಂದಿವೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಹೊಳೆಯಲ್ಲಿ ಅಪರಿಚಿತ ಶವ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್- ಆಂಟಿ ಪ್ರೀತಿಗೆ ಬಿತ್ತು ಹೆಣ!
ಇದು ವ್ಯಕ್ತಿಯ ಸರಿಯಾದ ಐಡಿಯೇ ಅಥವಾ ನಕಲಿ ಐಡಿ ಬಳಸಿ ಇ-ಮೇಲ್‍ಗಳನ್ನು ಕಳುಹಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆರೋಪಿಯಿಂದ ಮೊದಲು 20 ಕೋಟಿ ರೂ. ನೀಡುವಂತೆ ಇ-ಮೇಲ್ ಬಂದಿತ್ತು. ಈ ವೇಳೆ ದೂರು ನೀಡಲಾಗಿತ್ತು. ಇದಾದ ಕೆಲವು ದಿನಗಳ ನಂತರ 200 ಹಾಗೂ 400 ಕೋಟಿ ರೂ. ಬೇಡಿಕೆಯ ಇ-ಮೇಲ್‍ಗಳು ಬಂದಿದ್ದವು. ಅಲ್ಲದೇ ಹಣ ನೀಡದೇ ಇದ್ದರೆ ಗುಂಡಿಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ.
ಮುಕೇಶ್ ಅಂಬಾನಿ ಅವರಿಗೆ ಈ ಹಿಂದೆ ಸಹ ಕೊಲೆ ಬೆದರಿಕೆ ಬಂದಿತ್ತು. ಅಂಬಾನಿ ಮತ್ತು ಅವರ ಕುಟುಂಬ ಸದಸ್ಯರನ್ನು ಗುರಿಯಾಗಿಸಿಕೊಂಡು ಬೆದರಿಕೆ ಕರೆ ಮಾಡಿದ್ದಕ್ಕಾಗಿ ಮುಂಬೈ ಪೊಲೀಸರು ಕಳೆದ ವರ್ಷ ಬಿಹಾರದ ವ್ಯಕ್ತಿಯನ್ನು ಬಂಧಿಸಿದ್ದರು. ಇದನ್ನೂ ಓದಿ: ಆಧಾರ್ ಲಿಂಕ್ ಮಾಡಿ ಇಪ್ಪತ್ತೆಂಟುವರೆ ಸಾವಿರ ದೋಚಿದ ವಂಚಕರು