ಹಾಸನ: ಅರ್ಧ ಕೆಜಿ ಚಿನ್ನ, 50 ಲಕ್ಷ ರೂ. ಹಣ ಕೊಟ್ಟರೂ ವರದಕ್ಷಿಣೆಗಾಗಿ ಮಗಳನ್ನು ಲೋಕನಾಥ್ ಪೀಡಿಸಿ ಹತ್ಯೆ ಮಾಡಿದ್ದಾನೆ ಎಂದು ಮಮತಾ ಪೋಷಕರು ಆರೋಪಿಸಿದ್ದಾರೆ.
ಹಾಸನ (Hassan) ಹೊರವಲಯದ ಚನ್ನಪಟ್ಟಣ ಬಡಾವಣೆಯ ಮಮತಾ ಹಾಗೂ ಕೆ.ಆರ್.ಪುರಂನ ಲೋಕನಾಥ್ 17 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಬಳಿಕ ಲೋಕನಾಥ್‍ಗೆ ಅರ್ಧ ಕೆಜಿ ಚಿನ್ನ, 50 ಲಕ್ಷ ರೂ. ಹಣ ಹಾಗೂ ಜಾಗವನ್ನು ನೀಡಲಾಗಿತ್ತು. ಆದರೂ ಆತ ಮಮತಾಗೆ ನಿರಂತರವಾಗಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಈ ಬಗ್ಗೆ ದೂರು ನೀಡುವಂತೆ ಹೇಳಿದ್ದರೂ ಸಹ ಮಮತಾ ಮರ್ಯಾದೆಗೆ ಅಂಜಿ ಸುಮ್ಮನಿದ್ದರು. ಇಂದು (ಜು.1) ದೂರು ನೀಡಲು ಎಸ್‍ಪಿ ಕಚೇರಿ ಬಳಿ ಬಂದಿದ್ದಾಗ ಚಾಕು ಇರಿದಿದ್ದಾನೆ ಎಂದು ಪೋಷಕರು ಆಸ್ಪತ್ರೆ ಬಳಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಹಾಸನ ಎಸ್‌ಪಿ ಕಚೇರಿ ಆವರಣದಲ್ಲೇ ಪತ್ನಿಯನ್ನು ಹತ್ಯೆಗೈದ ಪತಿ
ಹಾಸನ ನಗರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಲೋಕನಾಥ್ ಮತ್ತು ಆತನ ಪತ್ನಿ ಮಮತಾ ನಡುವೆ 4-5 ದಿನಗಳಿಂದ ಜಗಳ ನಡೆದಿತ್ತು. ಇಂದು ಪತಿ ವಿರುದ್ಧ ದೂರು ನೀಡಲು ಎಸ್‍ಪಿ ಕಚೇರಿಗೆ ಪತ್ನಿ ಬಂದಿದ್ದರು. ಈ ವೇಳೆ ಆರೋಪಿ ಚಾಕು ಇರಿದು ಆಕೆಯನ್ನು ಹತ್ಯೆಗೈದಿದ್ದಾನೆ.
ಪತ್ನಿ ತನ್ನ ವಿರುದ್ಧ ದೂರು ನೀಡಲು ಬರುತ್ತಿರುವುದನ್ನು ಗಮನಿಸಿದ ಲೋಕನಾಥ್ ಆವರಣದಲ್ಲೇ ಮಮತಾ ಎದೆಗೆ ಚಾಕು ಇರಿದಿದ್ದಾನೆ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಮಮತಾ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಮತಾ ಮೃತಪಟ್ಟಿದ್ದಾರೆ. ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಗಂಡ ಬೇಕೆಂದು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಧರಣಿ ಕುಳಿತ ಪತ್ನಿ!