ಕೋಲಾರ: ಇಡೀ ದೇಶದ ಗಮನ ಸೆಳೆದಿದ್ದ ಮಾಲೂರು (Malur) ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕಾರ್ಯ ಸಾಕಷ್ಟು ಕುತೂಹಲಗಳ ನಡುವೆ ಮುಗಿದಿದ್ದು, ಸತತವಾಗಿ ಹನ್ನೆರಡು ಗಂಟೆಗಳ ಕಾಲ ನಡೆದ ಮರು ಎಣಿಕೆ ಕಾರ್ಯದಲ್ಲಿ ಅಭ್ಯರ್ಥಿಗಳಿಗೆ ಇದ್ದ ಗೊಂದಲವನ್ನು ಬಹುತೇಕ ನಿವಾರಣೆ ಮಾಡಲಾಗಿದೆ. ಕಳೆದ ಫಲಿತಾಂಶವೇ ಯತಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ.
ಕೋಲಾರ (Kolar) ಜಿಲ್ಲೆ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಮರು ಮತ ಎಣಿಕೆ (Vote Recount) ಕೋರಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ (Manjunath Gowda) ಹೈಕೋರ್ಟ್ ಮೊರೆ ಹೋಗಿದ್ದರು. ಎರಡೂವರೆ ವರ್ಷಗಳ ಕಾಲ ವಿಚಾರಣೆ ನಡೆಸಿದ ಹೈಕೋರ್ಟ್ ಮರು ಎಣಿಕೆಗೆ ಆದೇಶ ಮಾಡಿ ನಂತರ ಹಾಲಿ ಶಾಸಕರನ್ನು ಅಸಿಂಧು ಮಾಡಿತ್ತು. ಅಸಿಂಧು ಅದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಶಾಸಕ ನಂಜೇಗೌಡ ಅವರಿಗೆ ಅಸಿಂಧು ಆದೇಶ ತಡೆಯಾಜ್ಞೆ ನೀಡಿ ಮರು ಎಣೆಕೆಗೆ ಆದೇಶಿಸಿತ್ತು.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ಮರು ಎಣಿಕೆ ಕಾರ್ಯ ನಡೆಯಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಮರು ಎಣಿಕೆ ಕಾರ್ಯ ಸತತವಾಗಿ ರಾತ್ರಿ 8 ಗಂಟೆವರೆಗೆ ನಡೆಯಿತು. ಮೊದಲು ಪೋಸ್ಟಲ್ ಬ್ಯಾಲೆಟ್ ಎಣಿಕೆ ಮಾಡಿ ನಂತರ ಇವಿಎಂಗಳ ಎಣಿಕೆ ಕಾರ್ಯ ನಡೆಯಿತು. ಅಭ್ಯರ್ಥಿಗಳ ಸಮ್ಮುಖದಲ್ಲಿ ಅವರ ಎಲ್ಲಾ ಗೊಂದಲ ಅನುಮಾನಗಳನ್ನು ಪರಿಹರಿಸಿದ ನಂತರ ಎಣಿಕೆ ಕಾರ್ಯ ನಡೆಸಲಾಗುತ್ತಿತ್ತು.
ಇನ್ನು ರಾಜ್ಯ ಚುನಾವಣಾ ಆಯೋಗ ಮತ ಎಣಿಕೆ ಮೇಲೆ ಹದ್ದಿನ ಕಣ್ಣಿಟ್ಟು ಪ್ರತಿ ಸುತ್ತಿನ ಎಣಿಕೆಯ ಮಾಹಿತಿ ಪಡೆಯುತ್ತಿತ್ತು. ರಾಜ್ಯ ಚುನಾವಣಾ ಆಯೋಗದ ಸೂಚನೆ ನಂತರವೇ ಪ್ರತಿ ಸುತ್ತಿನ ಎಣಿಕೆ ಕಾರ್ಯ ಮಾಡಲಾಗಿದೆ. ಹದಿನಾಲ್ಕು ಟೇಬಲ್‌ಗಳಲ್ಲಿ ಒಟ್ಟು 18 ಸುತ್ತಿನ ಮತ ಎಣೆಕೆ ಕಾರ್ಯ ಮಾಡಿ ಮುಗಿಸಲಾಗಿದೆ. ಸದ್ಯ ಎಣಿಕೆಯ ನಂತರ ಪೋಸ್ಟಲ್ ಬ್ಯಾಲೆಟ್‌ನಲ್ಲಿ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿದರೆ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಎಣಿಕೆ ನಂತರ ಪ್ರತಿಕ್ರಿಯೆ ನೀಡಿದ ಶಾಸಕ ನಂಜೇಗೌಡ (KY Nanjegowda), ಇಂದಿನ ಎಣಿಕೆ ಕಾರ್ಯ ಸಂತೋಷ ತಂದಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆ ನ್ಯಾಯ ಸಿಕ್ಕಿದೆ. ಎರಡೂವರೆ ವರ್ಷಗಳ ಕಾಲ ನನಗಾದ ನೋವಿಗೆ ಪರಿಹಾರ ಸಿಕ್ಕಿದೆ ಎಂದರು.
ಇನ್ನು ಮರು ಎಣಿಕೆಗಾಗಿ ಎರಡೂವರೆ ವರ್ಷಕಾಲ ನಿರಂತರವಾಗಿ ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದ ಮಾಲೂರು ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಇಂದು ಅವರ ಸಾಕಷ್ಟು ಬೆಂಬಲಿಗರು ಹಾಗೂ ವಕೀಲರೊಂದಿಗೆ ಮರು ಎಣಿಕೆ ಕೇಂದ್ರಕ್ಕೆ ಬಂದಿದ್ದರು. ಮರು ಎಣಿಕೆ ನಂತರ ಮಾಜಿ ಶಾಸಕ ಮಂಜುನಾಥಗೌಡ ಪ್ರತಿಕ್ರಿಯೆ ನೀಡಿ, ನನಗೆ ಇನ್ನೂ ಸಮಾಧಾನ ಆಗಿಲ್ಲ, ಇನ್ನೂ ಕೆಲವೊಂದು ಪ್ರಶ್ನೆಗಳಿಗೆ ನನಗೆ ಉತ್ತರ ಸಿಕ್ಕಿಲ್ಲ. ಅಧಿಕಾರಿಗಳ ಪ್ರೊಸೀಜರ್ ಲ್ಯಾಪ್ಸ್ ಇದೆ. ಸಂಪೂರ್ಣ ವಿವಿ ಪ್ಯಾಟ್‌ಗಳನ್ನು ಎಣಿಸಬೇಕಿತ್ತು. ಆದರೆ ಕೇವಲ ಐದು ವಿವಿ ಪ್ಯಾಟ್ ಮಾತ್ರ ಎಣಿಕೆ ಮಾಡಿದೆ. ಚುನಾವಣೆ ಮರುಎಣಿಕೆ ವಿರುದ್ಧ ನನ್ನ ಕಾನೂನು ಹೋರಾಟ ಮುಂದುವರೆಯಲಿದೆ. ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಪರಿಗಣಿಸಿ ಎಂದು ಹೇಳಿತ್ತು. ಆದರೆ ಕೆಲವೊಂದು ನನ್ನ ಮನವಿಗೆ ಪ್ರಾಧಾನ್ಯತೆ ಸಿಕ್ಕಿಲ್ಲ. ನನ್ನ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.
ಒಟ್ಟಾರೆ ಇಡೀ ದೇಶದ ಗಮನ ಸೆಳೆದಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಿದೆ. ನವೆಂಬರ್ 24ರಂದು ಮರು ಎಣಿಕೆಯ ಫಲಿತಾಂಶ ಹೊರಬೀಳಲಿದೆ.

