ಕರ್ನಾಟಕದಲ್ಲಿ 25 ಲೋಕಸಭೆ ಸ್ಥಾನ ಗೆಲ್ಲಬೇಕು- ಕೈ ನಾಯಕರಿಗೆ ಹೈಕಮಾಂಡ್ ಬಿಗ್ ಟಾಸ್ಕ್

Public TV
3 Min Read
CONGRESS LEADER

– ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಆಯಾ ಜಿಲ್ಲೆಗಳ ಹೊಣೆ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Election) ಕಾಂಗ್ರೆಸ್ (Congress) ಆಡಳಿತವಿರುವ ಕರ್ನಾಟಕದಲ್ಲಿ 25 ಸ್ಥಾನಗಳನ್ನು ಗೆಲ್ಲುವ ದೊಡ್ಡ ಗುರಿಯೊಂದಿಗೆ ಹೈಕಮಾಂಡ್ ರಣತಂತ್ರ ರೂಪಿಸತೊಡಗಿದೆ.

ದೆಹಲಿಯಲ್ಲಿ (New Delhi) ರಾಜ್ಯ ನಾಯಕರೊಂದಿಗೆ ಹೈಕಮಾಂಡ್ ನಾಯಕರು ಸಭೆ ಮೇಲೆ ಸಭೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) 50ಕ್ಕೂ ಹೆಚ್ಚು ನಾಯಕರು ಪಾಲ್ಗೊಂಡಿದ್ರು. ಜನ ನಮ್ಮ ಪರವಾಗಿದ್ದಾರೆ. ಜನ ನಮ್ಮ ಪರವಾಗಿರ್ತಾರೆ ಎನ್ನುವುದಕ್ಕೆ ವಿಧಾನಸಭೆ ಚುನಾವಣೆ ಫಲಿತಾಂಶವೇ ಸಾಕ್ಷಿ. ಈ ನಿಟ್ಟಿನಲ್ಲಿ ಕೆಲಸ ಮಾಡಿ. ಕಾಂಗ್ರೆಸ್ ಗ್ಯಾರಂಟಿಗಳನ್ನು (Congress Guarantee) ಜನರಿಗೆ ತಲುಪಿಸಿ. ಜನ ಯಾವುದೇ ಕಾರಣಕ್ಕೂ ನಮ್ಮ ಕೈಬಿಡುವುದಿಲ್ಲ ಎಂದು ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದರು. ವಿಪಕ್ಷಗಳ ಟೀಕೆಗೆ ಗಮನ ಕೊಡದೇ ಮುಂದುವರಿಯಿರಿ ಎಂದು ಸಲಹೆ ನೀಡಿದ್ರು.

ಈ ಸಂದರ್ಭದಲ್ಲಿ ಮಾತಾಡಿದ ಶೆಟ್ಟರ್ (Jagadeesh Shettar) ಮತ್ತು ಲಕ್ಷ್ಮಣ ಸವದಿ (Laxman Savadi), ರಾಜ್ಯ ಬಿಜೆಪಿ ನಾಯಕತ್ವ ಇಲ್ಲದ ಮನೆಯಾಗಿದೆ. ಇದೇ ಅವಕಾಶ ಬಳಸಿಕೊಂಡು ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕು. ಗ್ಯಾರಂಟಿಗಳ ಮೂಲಕ ಜನರನ್ನು ರೀಚ್ ಆಗಬಹುದು. ಇದು ಲೋಕಸಮರದಲ್ಲೂ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ ಅಂತಾ ಅಭಿಪ್ರಾಯಪಟ್ರು. ನಂತರ ಎರಡನೇ ಸಭೆಯನ್ನು ಸಚಿವರೊಂದಿಗೆ ಹೈಕಮಾಂಡ್ ಪ್ರತ್ಯೇಕವಾಗಿ ನಡೆಸಿತು. ಈ ಸಂದರ್ಭದಲ್ಲಿ ಸಚಿವರಿಗೆ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಭ್ರಷ್ಟಾಚಾರದ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ರಾಹುಲ್ ಎಚ್ಚರಿಕೆ ನೀಡಿದ್ರು. ಸಚಿವರು ಕಾರ್ಯಾಧ್ಯಕ್ಷ ಸ್ಥಾನಗಳಿಗೆ ರಾಜೀನಾಮೆ ಕೊಡ್ಬೇಕು ಎಂದು ಸೂಚಿಸಿದರು.

ಬಿಗ್ ಟಾಸ್ಕ್: ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿ ಉತ್ತಮವಾಗಿದೆ. ಈಗ ಚುನಾವಣೆ ನಡೆದರೂ 15-20 ಸೀಟ್ ಸಿಗುತ್ತೆ. ಆದರೆ ಕರ್ನಾಟಕದಲ್ಲಿ ಕನಿಷ್ಠ 25 ಸ್ಥಾನ ಗೆಲ್ಲಲೇಬೇಕು. 25 ಸ್ಥಾನ ಗೆಲ್ಲಿಸುವ ಹೊಣೆ ಸಚಿವರು, ಶಾಸಕರದ್ದಾಗಿದೆ. ಇದಕ್ಕಾಗಿ 5 ಗ್ಯಾರಂಟಿಗಳ ಅನುಷ್ಠಾನ ವ್ಯವಸ್ಥಿತವಾಗಿ ಆಗಬೇಕು. ಅನುಷ್ಠಾನದ ಬಳಿಕ ಫಲಾನುಭವಿಗಳ ಸಭೆ, ಸಮಾರಂಭ ಮಾಡಬೇಕು. ಬಿಜೆಪಿಗರು ಹಿಂದು, ಮುಸ್ಲಿಂ ಎಂಬ ತಂತ್ರವನ್ನ ಮಾಡಬಹುದು. ಇದಕ್ಕೆ ಪ್ರತಿಯಾಗಿ ನಾವು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಬೇಕು.

ಸಣ್ಣಪುಟ್ಟ ಮನಸ್ಥಾಪ ಏನೇ ಇರಲಿ. ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡಿ. ಬಹಿರಂಗ ಹೇಳಿಕೆಗಳು, ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಸಲ್ಲದು. ಈಗಿನಿಂದಲೇ ಲೋಕಸಭೆ ಚುನಾವಣೆಗೆ ತಯಾರಿ ಆಗಬೇಕು. ಲೋಕಸಭೆ ಅಭ್ಯರ್ಥಿಗಳನ್ನು ಬೇಗ ಗುರುತಿಸಿ ಮಾಹಿತಿ ನೀಡಿ. ಬಿಜೆಪಿ-ಜೆಡಿಎಸ್ ನಡೆ ಗಮನಿಸಿ ಅಭ್ಯರ್ಥಿ ಅಂತಿಮಗೊಳಿಸಬೇಕು. ಬಿಜೆಪಿ ಜೆಡಿಎಸ್ ಒಂದಾದ್ರೆ ಸಂಪೂರ್ಣವಾಗಿ ರಣತಂತ್ರ ಬದಲಿಸಬೇಕು. ಚುನಾವಣೆ ಅಸ್ತ್ರವಾಗಿ ಬೆಲೆ ಏರಿಕೆಗಳ ವಿರುದ್ಧ ಹೋರಾಟ ರೂಪಿಸಿ.

ಸಚಿವರಿಗೆ ವಾರ್ನಿಂಗ್: ಬಿಜೆಪಿ (BJP) ಭ್ರಷ್ಟಾಚಾರದ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ಅಂಥಾ ಆರೋಪ ನಮ್ಮ ಸರ್ಕಾರದ ಮೇಲೆ ಬರಬಾರದು. ಯಾವುದೇ ಕಾರಣಕ್ಕೂ ನಾವು ಭ್ರಷ್ಟಾಚಾರ ಸಹಿಸಲ್ಲ. ಯಾರ ವಿರುದ್ಧವಾದ್ರೂ ಸಾಕ್ಷ್ಯ ಸಿಕ್ಕಿದ್ರೆ ಮುಲಾಜಿಲ್ಲದೇ ವಜಾಗೊಳಿಸಲಾಗುವುದು. ಒಬ್ಬರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಿದರೆ ಇನ್ನೋಬ್ಬರಿಗೆ ಅವಕಾಶ ಸಿಗುತ್ತೆ. ಪ್ರತಿ ಕ್ಷೇತ್ರಕ್ಕೆ ಓರ್ವ ಸಚಿವ ಹಾಗೂ ಓರ್ವ ನಾಯಕ ಉಸ್ತುವಾರಿ ವಹಿಸಿ.

ಆಯಾ ಕ್ಷೇತ್ರದ ಸೋಲು ಗೆಲುವಿಗೆ ಆಯಾ ಸಚಿವರೇ ಹೊಣೆಯಾಗಿರುತ್ತಾರೆ. ಸರ್ಕಾರದ ಮೇಲೆ ಯಾವುದೇ ಕಪ್ಪು ಚುಕ್ಕಿ ಬಾರದಂತೆ ನೋಡಿಕೊಳ್ಳಿ. ಪಾರದರ್ಶಕ ಆಡಳಿತ ನೀಡಿ, ನಿಮ್ಮ ನಿಮ್ಮ ಇಲಾಖೆಗಳಲ್ಲಿ ಉತ್ತಮ ಕೆಲಸ ಮಾಡಿ. ಪಕ್ಷಕ್ಕೆ ಈಗಿರುವ ಜನಪ್ರಿಯತೆಯನ್ನು ಉಳಿಸಿ, ಮತ್ತಷ್ಟು ಬೆಳೆಸಿ. ಸಾರ್ವತ್ರಿಕ ಚುನಾವಣೆಯಲ್ಲೂ ಮತಪ್ರಮಾಣ ಕಡಿಮೆ ಆಗದಂತೆ ನೋಡಿಕೊಳ್ಳಿ ಎಂದು ಸಚಿವರಿಗೆ ಎಚ್ಚರಿಕೆ ನೀಡಲಾಗಿದೆ.

Web Stories

Share This Article